ಕಲಬುರಗಿ | ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಿ: ಶ್ರೀಧರ್ ನಾಗನಹಳ್ಳಿ

ಕಲಬುರಗಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯೂ ತಪ್ಪದೇ ಭಾಗವಹಿಸಬೇಕೆಂದು ವೀರಶೈವ ಲಿಂಗಾಯತ ಸಮುದಾಯದ ಯುವ ಮುಖಂಡ ಶ್ರೀಧರ್ ಎಮ್.ನಾಗನಹಳ್ಳಿ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ “ಹಿಂದೂ” ಎಂದು, ಜಾತಿಯ ಕಾಲಂನಲ್ಲಿ “ಲಿಂಗಾಯತ” ಅಥವಾ “ವೀರಶೈವ ಲಿಂಗಾಯತ” ಎಂದು ಹಾಗೂ ಉಪಜಾತಿ ಕಾಲಂನಲ್ಲಿ ತಾವು ಸೇರಿದ ಉಪಜಾತಿಯ ಸಂಕೇತ ಸಂಖ್ಯೆಯನ್ನು ಖಚಿತಪಡಿಸಿಕೊಂಡು ನಮೂದಿಸಬೇಕು. ಈ ಮಾಹಿತಿಯನ್ನು ಸರಿಯಾಗಿ ದಾಖಲಿಸಿದ್ದಾರೆಯೇ ಎಂಬುದನ್ನು ದೃಢಪಡಿಸಿ ಒಪ್ಪಿಗೆ ನೀಡುವಂತೆ ಅವರು ತಿಳಿಸಿದ್ದಾರೆ.
ಜಾತಿ ಜನಗಣತಿಯ ಕುರಿತು ಸಮುದಾಯದಲ್ಲಿ ಗೊಂದಲಗಳು ಉಂಟಾಗಿವೆ. ಕೆಲವರು ಲಿಂಗಾಯತ ಧರ್ಮವೆಂದು, ಕೆಲವರು ವೀರಶೈವ ಲಿಂಗಾಯತ ಧರ್ಮವೆಂದು ಹೇಳಿಕೆ ನೀಡುತ್ತಿದ್ದಾರೆ. ಸದ್ಯ ನಾವೆಲ್ಲ ಹಿಂದೂ ಧರ್ಮದಡಿಯಲ್ಲಿ ಸೌಲಭ್ಯಗಳನ್ನು ಪಡೆಯುತ್ತಿದ್ದೇವೆ. ಲಿಂಗಾಯತ ಅಥವಾ ವೀರಶೈವ ಲಿಂಗಾಯತ ಧರ್ಮಕ್ಕೆ ಅಧಿಕೃತ ಮಾನ್ಯತೆ ಸಿಕ್ಕ ನಂತರ, ಧರ್ಮ ಕಾಲಂನಲ್ಲಿ ನಮ್ಮ ಧರ್ಮವನ್ನು ದಾಖಲಿಸುವುದು ಸೂಕ್ತ ಎಂದಿದ್ದಾರೆ.
ಲಿಂಗಾಯತ ಸಮುದಾಯದ ಜನರು ಗೊಂದಲಕ್ಕೊಳಗಾಗದೇ, ಸಮೀಕ್ಷೆಯಲ್ಲಿ ಪಾಲ್ಗೊಂಡು ಅಧಿಕೃತವಾಗಿ ಭಾರತೀಯ ಒಕ್ಕೂಟದ ವ್ಯವಸ್ಥೆಯಡಿ ತಮ್ಮ ಮಾಹಿತಿ ನೊಂದಾಯಿಸಲು ನಾಗನಹಳ್ಳಿ ಮನವಿ ಮಾಡಿದ್ದಾರೆ.







