Kalaburagi | ಜಿಲ್ಲಾ ಪಂಚಾಯತ್ ಸಿ.ಇ.ಓ.ಗೆ ಬೀಳ್ಕೊಡುಗೆ ಕಾರ್ಯಕ್ರಮ

ಕಲಬುರಗಿ : ಜಿಲ್ಲೆಯ ಅಭಿವೃದ್ಧಿಗೆ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ತಂಡದ ರೂಪದಲ್ಲಿ ಕಾರ್ಯನಿರ್ವಹಿಸಿದ ತೃಪ್ತಿ ತಮಗಿದೆ ಎಂದು ನಿರ್ಗಮಿತ ಜಿಲ್ಲಾ ಪಂಚಾಯತ್ ಸಿಇಒ ಭಂವರ್ ಸಿಂಗ್ ಮೀನಾ ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಚಿಕ್ಕಮಂಗಳೂರು ಜಿಲ್ಲಾಧಿಕಾರಿಯಾಗಿ ಮುಂಬಡ್ತಿ ಪಡೆದು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮೂರು ವರ್ಷಗಳ ಕಾಲ ಗ್ರಾಮೀಣ ಜನರ ಸೇವೆ ಸಲ್ಲಿಸುವ ಅವಕಾಶ ದೊರೆತಿದ್ದು ಸಂತಸ ತಂದಿದೆ. ಕಲಬುರಗಿ ದೊಡ್ಡ ಜಿಲ್ಲೆಯಾಗಿದ್ದು, ಇಲ್ಲಿ ಕಾರ್ಯನಿರ್ವಹಿಸಿದ ಅನುಭವ ಮುಂದಿನ ಸೇವೆಗೆ ಆತ್ಮವಿಶ್ವಾಸ ನೀಡಿದೆ ಎಂದು ಹೇಳಿದರು.
ಜಿಲ್ಲೆಯ ಎಲ್ಲ ಅಧಿಕಾರಿಗಳು ತಂಡದ ರೂಪದಲ್ಲಿ ಕಾರ್ಯನಿರ್ವಹಿಸಿ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದಾರೆ. ಇದೇ ರೀತಿಯ ಸಹಕಾರ ನೂತನ ಸಿಇಒ ಹಾಗೂ ಜಿಲ್ಲಾಧಿಕಾರಿಗಳಿಗೆ ಮುಂದುವರಿಯಬೇಕು ಎಂದು ಮನವಿ ಮಾಡಿದರು.
ಜನರ ಸಮಸ್ಯೆಗಳನ್ನು ಆಲಿಸಿದರೆ ಅರ್ಧ ಕೆಲಸ ಮುಗಿದಂತೆಯೇ ಎಂಬುದನ್ನು ಪಂಚಾಯತ್ ಅಧಿಕಾರಿಗಳು ಮರೆಯಬಾರದು ಎಂದು ಸಲಹೆ ನೀಡಿದರು.
ಆರ್‌ಡಿಪಿಆರ್ ಇಲಾಖೆಯ ಮೂಲಕ ಹಲವು ಜನಪರ ಯೋಜನೆಗಳನ್ನು ಪ್ರಾಮಾಣಿಕವಾಗಿ ಜಾರಿಗೆ ತರಲು ಪ್ರಯತ್ನಿಸಿದ್ದಾಗಿ ತಿಳಿಸಿದ ಅವರು, ಕೆಲಸದಲ್ಲಿ ನಿರ್ಲಕ್ಷ್ಯ ತೋರಿದ ಕೆಲ ಪಿಡಿಒಗಳ ವಾರ್ಷಿಕ ವೇತನ ಬಡ್ತಿ ತಡೆಹಿಡಿದಿದ್ದೆ. ಬಳಿಕ ಅವರು ಕೆಲಸದಲ್ಲಿ ಸುಧಾರಣೆ ತೋರಿದ್ದರಿಂದ ವರ್ಗಾವಣೆಗೆ ಮುನ್ನವೇ ಅವರ ವೇತನ ಬಡ್ತಿ ಕಡತಗಳಿಗೆ ಸಹಿ ಹಾಕಿರುವುದಾಗಿ ಹೇಳಿದರು.
ಈ ವೇಳೆ ನೂತನ ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಸಂಕನೂರ್ ಅವರನ್ನು ಜಿಲ್ಲಾ ಪಂಚಾಯತ್ ಸಿಬ್ಬಂದಿ ಹೂಗುಚ್ಛ ನೀಡಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಇಕ್ರಮ್ ಶರೀಫ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ ಶರಣಪ್ಪ, ಎಸ್.ಪಿ. ಅಡ್ಡೂರು ಶ್ರೀನಿವಾಸುಲು, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ ಸೇರಿದಂತೆ ಜಿಲ್ಲಾ ಪಂಚಾಯತಿಯ ಅಧಿಕಾರಿ-ಸಿಬ್ಬಂದಿಗಳು, ಇತರೆ ಇಲಾಖೆಯ ಅಧಿಕಾರಿಗಳು, ತಾಲೂಕಿನ ತಹಶೀಲ್ದಾರರು, ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಭಾಗವಹಿಸಿದ್ದರು.
ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿನ ಎಲ್ಲಾ ಇಲಾಖೆಯ ಕೆಲಸಗಳನ್ನು ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ಮಾಡಿದ್ದಾರೆ. ಹೀಗಾಗಿ ಭಂವರ್ ಸಿಂಗ್ ಮೀನಾರವರು ಜನಮೆಚ್ಚುಗೆಯನ್ನ ಪಡೆದಿದ್ದಾರೆ. ನನಗೆ ವೈಯಕ್ತಿಕವಾಗಿ ಸಹ ತುಂಬಾ ಆತ್ಮೀಯರು. ಇದೀಗ ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಹೋಗ್ತಿದ್ದಾರೆ. ಹೀಗೆ ಅವರ ಜನಪರ ಸೇವೆ ಮುಂದುವರೆಯಲಿ ಎಂದು ಹಾರೈಸುವೆ.
-ಇಕ್ರಮ್ ಶರೀಫ್, ಜಿಲ್ಲಾಧಿಕಾರಿ ಕಲಬುರಗಿ






