ಕಲಬುರಗಿ | ನೆರೆ ಪರಿಹಾರಕ್ಕೆ ಒತ್ತಾಯಿಸಿ ನ.4 ರಂದು ರೈತರಿಂದ ದುಂಡು ಮೇಜಿನ ಸಭೆ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೆಳೆಹಾನಿ ಮತ್ತು ಅತಿವೃಷ್ಟಿಯಿಂದ ಕಂಗೆಟ್ಟ ರೈತರ ಪರವಾಗಿ ಕೇಂದ್ರ ಮತ್ತು ರಾಜ್ಯ ಸರಕಾರದ ತಾರತಮ್ಯ ಧೋರಣೆ ಖಂಡಿಸಿ, ರೈತರ ಬೆಳೆ ಹಾನಿ ಅತಿವೃಷ್ಟಿ ಪರಿಹಾರದ ಕುರಿತು ಮುಂದಿನ ಹೋರಾಟದ ರೂಪರೇಷ ಸಿದ್ಧಪಡಿಸಲು ನ.4 ರಂದು ಬೆಳಿಗ್ಗೆ 11 ಘಂಟೆಗೆ ನಗರದ ಕನ್ನಡ ಭವನದಲ್ಲಿ ರೈತ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ದುಂಡು ಮೇಜಿನ ಸಭೆ ಕರೆಯಲಾಗಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ರೈತನ ಸಂಘಟನೆಯ ಅಧ್ಯಕ್ಷ ಚಂದು ಪಾಧವ ಮನವಿ ಮಾಡಿದ್ದಾರೆ.
ಭಾನುವಾರ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಎಮ್ ಡಿ ಆರ್ ಎಫ್ ಮತ್ತು ಎಸ್ ಡಿ ಆರ್ ಎಫ್ ಅಡಿಯಲ್ಲಿ ಪರಿಹಾರಕ್ಕಾಗಿ ಮುಂಗಡ ಅನುದಾನ ಬಿಡುಗಡೆ ಮಾಡಿದೆ. ಕರ್ನಾಟಕಕ್ಕೆ ಕೇವಲ 385 ಕೋಟಿ ರೂಪಾಯಿ ಬಿಡುಗಡೆ ಮಾಡಿ, ಮಹಾರಾಷ್ಟ್ರಕ್ಕೆ 1,559 ಕೋಟಿ ಬಿಡುಗಡೆ ಮಾಡಿದೆ. ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಗಳಲ್ಲಿ ಅತಿಯಾದ ಮಳೆ ಮತ್ತು ನದಿಗಳಾದ ಭೀಮಾ ಮತ್ತು ಬೆಣ್ಣೆಹೋರೆ ಗಂಡೋರಿ ನಾಲಾ, ಅಮರ್ಜಾ ಇವುಗಳ ಪ್ರವಾಹನೆರೆ ಹಾವಳಿಯಿಂದ ನದಿ ದಡದಲ್ಲಿರುವ 12 ಲಕ್ಷ 50,000 ಹೆಕ್ಟರ್ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆ, ಜಮೀನು, ಮನೆ, ಜಾನವರಗಳು ಕೊಚ್ಚಿಕೊಂಡು ಹೋಗಿವೆ ಎಂದರು.
ಕರ್ನಾಟಕದಿಂದ ಆಯ್ಕೆಯಾದ ಬಿಜೆಪಿ ಸಂಸದರು, ಕೇಂದ್ರದ ಸಚಿವರು ಹಾಗೂ ಕಲಬುರಗಿ ವಿಭಾಗದ ಬಿಜೆಪಿ ಶಾಸಕ ಮತ್ತು ವಿಧಾನ ಪರಿಷತ್ ಸದಸ್ಯರು ನಿಯೋಗ ಕೇಂದ್ರ ಸರಕಾರಕ್ಕೆ ಮನವಿ ಮಾಡಿ ಹಸಿ ಬರಗಾಲ ಎಂದು ಘೋಷಣೆ ಮಾಡಿ ಹೆಚ್ಚಿನ ಪರಿಹಾರ ಕೊಡಿಸಲು ಮುಂದಾಗಬೇಕು. ಇಲ್ಲದಿದ್ದರೆ ರೈತರ ಜೊತೆಗೆ ಪ್ರತಿಭಟನೆಗೆ ಬರಬೇಕು ಎಂದು ಅಗ್ರಹಿಸಿದ್ದರು. ರಾಜ್ಯ ಸರಕಾರ ತನ್ನ ನೈತಿಕ ಜವಾಬ್ದಾರಿಯಿಂದ ನುಣಚಿಕೊಳ್ಳದೆ ಈಗಾಗಲೇ ಘೋಷಿಸಿರುವ ಪರಿಹಾರ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಮುಖಂಡರು ಆಗ್ರಹಿಸಿದ್ದರು.
ಸುದ್ದಿಗೋಷ್ಠಿಯಲ್ಲಿ ಶಾಂತಪ್ಪ ಪಾಟೀಲ್ ಸಣ್ಣೂರ, ಶೌಖತ ಅಲಿ ಆಲೂರ, ಸುನೀಲ್ ಮಾರುತಿ ಮಾನಪಡೆ, ಸೋಮಶೇಖರ ಸಿಂಗೆ, ವಿಠ್ಠಲ ಪೂಜಾರಿ ಸೇರಿದಂತೆ ಮುಂತಾದವರು ಇದ್ದರು.







