ಕಲಬುರಗಿ | ಜಿಲ್ಲಾಧಿಕಾರಿಗಳ ಭರವಸೆ ಬಳಿಕ ಪ್ರತಿಭಟನೆ ಹಿಂಪಡೆದ ರೈತರು

ಕಲಬುರಗಿ : ಹಾನಿಗೊಳಗಾದ ತೊಗರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಮತ್ತು ರೈತರ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಕಳೆದ ಮೂರು ದಿನಗಳಿಂದ ನೂರಾರು ರೈತರು ಎತ್ತಿನ ಬಂಡಿಗಳನ್ನು ಮುಂದಿಟ್ಟುಕೊಂಡು ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆಸುತ್ತಿದ್ದ ಅನಿರ್ಧಿಷ್ಟಾವಧಿ ಧರಣಿಯನ್ನು ರೈತರು ಹಿಂಪಡೆದುಕೊಂಡಿದ್ದಾರೆ.
ಶುಕ್ರವಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಡಿ.ಸಿ ಫೌಝಿಯಾ ತರನ್ನುಮ್ ಅವರು ಬೇಡಿಕೆಗಳನ್ನು ಈಡೇರಿಸುವುದಾಗಿ ರೈತ ಮುಖಂಡರೊಂದಿಗೆ ಮಾತುಕತೆ ನಡೆಸಿದ ಬಳಿಕ ಪ್ರತಿಭಟನಾನಿರತರು ಅನಿರ್ಧಿಷ್ಟಾವಧಿ ಧರಣಿಯಿಂದ ಹಿಂದೆ ಸರಿದಿದ್ದಾರೆ.
ಹಾನಿಗೊಳಗಾದ ತೊಗರಿಗೆ 800 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸುವುದು, ಖಾಸಗಿ ಬೆಳೆ ವಿಮೆಯಿಂದ ರೈತರಿಗೆ ತಾರತಮ್ಯವಾಗುತ್ತಿದೆ. ಇದಕ್ಕೆ ಖುದ್ದು ರಾಜ್ಯ ಸರಕಾರವೇ ಸಂಪೂರ್ಣ ವಿಮೆ ಮಾಡಿಸಬೇಕು, ಜಿಲ್ಲೆಯ ತೊಗರಿ ಬೆಳೆಗಾರರಿಗೆ GI ಟ್ಯಾಗ್ ಪಹಣಿ ಇದ್ದವರಿಗೆ ರೈತರಿಗೆ ಮಾನ್ಯತೆ ಕೊಡಬೇಕು, ತೊಗರಿ ಬೆಳೆಗೆ 10,000 ರೂ. ಕನಿಷ್ಠ ಬೆಂಬಲ ಬೆಲೆ ನೀಡಬೇಕು, ಮುಂದಿನ ವರ್ಷ ನೆಟೆ ರೋಗ ಬರದಂತೆ ಮುಂಜಾಗ್ರತೆ ವಹಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಸರಕಾರ ಕೂಡಲೇ ಈಡೇರಿಸಬೇಕೆಂದು ಪ್ರತಿಭಟನೆಯಲ್ಲಿ ಆಗ್ರಹಿಸಿದರು.
ರೈತರ ಎಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ಸಿಎಂ, ಡಿಸಿಎಂ ಅವರುಗಳ ಜೊತೆ ಚರ್ಚಿಸಿ, ಬಗೆ ಹರಿಸುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ರೈತ ಮುಖಂಡರು ಪ್ರತಿಭಟನೆಯನ್ನು ವಾಪಸ್ ಪಡೆದುಕೊಂಡರು. ಧರಣಿ ಹಿಂಪಡೆದ ಬಳಿಕ ರೈತರು ಅಲ್ಲಿಂದ ಎತ್ತಿನ ಬಂಡಿಗಳನ್ನು ಕಟ್ಟಿಕೊಂಡು ತಮ್ಮ ಗ್ರಾಮಗಳತ್ತ ಹೊರಡಿದರು. ಬಳಿಕ ಪಾಲಿಕೆಯ ಸಿಬ್ಬಂದಿಯವರು ಜಿಲ್ಲಾಧಿಕಾರಿಗಳ ಕಚೇರಿ ಎದುರಿರುವ ರಸ್ತೆಯನ್ನು ಸ್ವಚ್ಛಗೊಳಿಸಿದರು.
ಜಿಲ್ಲಾಧಿಕಾರಿಗಳ ಭರವಸೆ ನೀಡಿದ್ದ ವೇಳೆಯಲ್ಲಿ ರೈತ ಮುಖಂಡರಾದ ಅವ್ವಣ್ಣ ಮ್ಯಾಕೇರಿ, ಸುರೇಶ್ ಸಜ್ಜನ್, ಬಸವರಾಜ್ ಇಂಗಿನ, ಸಿದ್ರಾಮಪ್ಪ ಪಾಟೀಲ್ ಧಂಗಾಪುರ ಸೇರಿದಂತೆ ಹಲವು ರೈತ ಮುಖಂಡರು ಉಪಸ್ಥಿತರಿದ್ದರು.
ಅಹೋರಾತ್ರಿ ಧರಣಿ ನಡೆಸಿದ ರೈತರು :
ನಷ್ಟವಾಗಿದ್ದ ತೊಗರಿಗೆ ಪರಿಹಾರ ಘೋಷಿಸಬೇಕು ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಈಡೇರಿಸುವ ತನಕ ಪ್ರತಿಭಟನಾ ಜಾಗದಿಂದ ಕದಲುವುದಿಲ್ಲ ಎಂದು ರೈತರು ಪಣ ತೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮೊದಲ ದಿನ ರಾತ್ರಿಯಾಗುತ್ತಿದ್ದಂತೆ ರೈತರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಭಜನೆಗಳಲ್ಲಿ ತೊಡಗಿದರು. 2 ದಿನ ರಾತ್ರಿ 3 ಹಗಲು ಕಳೆದ ರೈತರು, ಪ್ರತಿಭಟನಾ ಸ್ಥಳದಲ್ಲೇ ಫುಂಡಿ ಪಲ್ಯ, ರೊಟ್ಟಿ ತಂದು ಊಟ ಮಾಡಿರುವ ಸಂದರ್ಭ ನಡೆಯಿತು. ಹೀಗೆ ರಾತ್ರಿ ಪೂರ್ತಿ ಕಚೇರಿಯ ಎದುರುಗಡೆಯೇ ತಂಗಿ, ರಾಜ್ಯ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.







