ಕಲಬುರಗಿ | ಕಳಪೆ ಬೀಜ, ನಕಲಿ ರಸಗೊಬ್ಬರ ಮಾರಾಟಗಾರರ ವಿರುದ್ಧ ದೂರು ದಾಖಲಿಸಿ: ಜಿಲ್ಲಾಧಿಕಾರಿ ಫೌಝಿಯಾ ತರುನ್ನುಮ್

ಕಲಬುರಗಿ: ಕಳಪೆ ಬೀಜ ಹಾಗೂ ನಕಲಿ ರಸಗೊಬ್ಬರ ಮಾರಾಟ ಕುರಿತಂತೆ ರೈತರಿಂದ ದೂರು ಕೇಳಿಬಂದಲ್ಲಿ ತಕ್ಷಣವೇ ಪೊಲೀಸ್ ದೂರು ದಾಖಲಿಸಿ, ಸಂಬಂಧಿಸಿದ ಅಧಿಕಾರಿಗಳು ಕಾಲ-ಕಾಲಕ್ಕೆ ಖಾಸಗಿ ಅಥವಾ ಯಾವುದೇ ವಿತರಕರ ಅಂಗಡಿಗಳಿಗೆ ಅಚಾನಕ್ಕಾಗಿ ಭೇಟಿ ನೀಡುವ ಮೂಲಕ ಪರಿಶೀಲಿಸಬೇಕು, ರೈತರಿಗೆ ಯಾವುದೇ ತೊಂದರೆಯಾದ ದೂರುಗಳು ಬಂದಲ್ಲಿ ತಕ್ಷಣವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರುನ್ನುಮ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕೃಷಿ ಸಂಬಂಧಿತ ಇಲಾಖೆಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು 2025-26ನೇ ಸಾಲಿನ ಕೃಷಿ ಇಲಾಖೆಯ ಕೇಂದ್ರ ಪುರಸ್ಕೃತ ಯೋಜನೆಗಳ ಕೃಷಿ ಯಾತ್ರಿಕರಣ ಉಪ ಅಭಿಯಾನ, ಸೂಕ್ಷ್ಮ ನೀರಾವರಿ ಅನುಷ್ಠಾನ, ಕಬ್ಬಿನ ಬೆಳೆ ಹಾಗೂ ಬೆಳೆ ಸಮೀಕ್ಷೆ ಕ್ರಿಯಾ ಯೋಜನೆ ಅನುಮೋದನೆ ಸೇರಿದಂತೆ ಜಿಲ್ಲೆಯ ಕೃಷಿ ಮತ್ತು ರೈತರ ಸಮಸ್ಯೆಗಳ ಕುರಿತು ಚರ್ಚಿಸಿದರು.
ವಿವಿಧ ಇಲಾಖೆಗಳ ವರದಿಯನ್ನು ಪರಿಶೀಲಿಸಿ ನಂತರ ಮಾತನಾಡಿದ ಅವರು, ಮುಂಗಾರು ಆರಂಭವಾಗಿರುವ ಹಿನ್ನಲೆಯಲ್ಲಿ ಬಿತ್ತನೆ ಬೀಜಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಪ್ರತಿ ತಾಲ್ಲೂಕಿಗೆ ಯಾವುದೇ ದೂರುಗಳಿಲ್ಲದೆ ವಿತರಿಸಬೇಕು. ಸೋಯಬೀನ್ ಬಿತ್ತನೆ ಬೀಜಗಳ ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸಬೇಕು, ರಸಗೊಬ್ಬರ ಸಹ ಸಾಕಷ್ಟು ಪ್ರಮಾಣದಲ್ಲಿ ಕಾದಿರಿಸಬೇಕು ಎಂದು ಹೇಳಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಯೋಜನೆಯಡಿ ರೈತರ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಅವರಿಗೆ ಟ್ರಾಕ್ಟರ್, ಪವರ್ ಟಿಲ್ಲರ್, ನೇಗಿಲು, ರೊಟೋವೇಟರ್ ನೀಡಲು ಕ್ರಮಕೈಗೊಳ್ಳಿ, ಶೇ.100 ರಷ್ಟು ಸಾಧನೆ ಮಾಡಿದಲ್ಲಿ ಸರ್ಕಾರದಿಂದ ಹೆಚ್ಚುವರಿಯಾಗಿ ಟಾರ್ಗೆಟ್ ಪಡೆದು ಕೆಲಸ ಮಾಡೋಣ.
ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಸರ್ಕಾರದ ಯೋಜನೆಗಳ ಲಾಭ ಪಡೆದು ಅತ್ಯುತ್ತಮ ರೈತರಾಗಿ ದುಡಿಯುತ್ತಿರುವವರನ್ನು ಗುರುತಿಸಬೇಕು. ಅವರ ಹೊಲಗಳಿಗೆ ಕೃಷಿ ಅಧಿಕಾರಿಗಳು ನೇರವಾಗಿ ಬೇಟಿ ನೀಡಿ ಸ್ಥಳೀಯರೊಂದಿಗೆ ಚಿಕ್ಕದಾಗಿ ಸಂವಾದವನ್ನು ಹಮ್ಮಿಕೊಳ್ಳಬೇಕು. ಮುಂಗಾರು ವಾಡಿಕೆಗಿಂತ ಈ ವರ್ಷ ಮುಂಚಿತವಾಗಿಯೇ ಪ್ರಾರಂಭವಾಗಿದ್ದು, ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆಗೆ ಮತ್ತು ಬೆಳೆ ವಿಮೆಗಳಿಗೆ ಸಂಬಂಧಿಸಿದಂತೆ ರೈತರಲ್ಲಿ ಅರಿವು ಮೂಡಿಸಬೇಕು, ಬೆಳೆ ಸರ್ವೆಯಲ್ಲಿ ಗೊಂದಲಗಳಾಗಬಾರದು, ರೈತರ ಮೋಬೈಲಿನಿಂದಲೇ ಅವರಿಂದ ಅರ್ಜಿ ಸಲ್ಲಿಸಲು ಪ್ರೇರೆಪಿಸಬೇಕು ಎಂದರು.
ಸಭೆಯಲ್ಲಿ ಮುಖ್ಯವಾಗಿ ಕಲಬುರಗಿ ಜಿಲ್ಲೆಯಲ್ಲಿ ತೊಗರಿ ಬೆಳೆಗೆ ನೋಂದಣಿ ಮಾಡಿದಂತಹ ರೈತರ ಬೆಳೆ ಸಮೀಕ್ಷೆಯ ದತ್ತಾಂಶದ ಪ್ರಕಾರ ತೊಗರಿ ಬೆಳೆ ಇರುವುದನ್ನು ಪರಿಶೀಲಿಸುವುದು, ಪ್ರಸ್ತುತ ಸಂಧರ್ಭದಲ್ಲಿ ಸ್ಪಷ್ಟ ಅಭಿಪ್ರಾಯದೊಂದಿಗೆ ನೊಂದಣಿ ಮಾಡಿದ ರೈತವಾರು ಪಟ್ಟಿ ಸಲ್ಲಿಸುವುದು ಸೇರಿದಂತೆ ಇನ್ನಿತರ ಮೂಲಗಳ ದತ್ತಾಂಶವನ್ನು ಸಂಗ್ರಹಿಸಿ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತೊಗರಿ ಬೆಳೆಯ ಅವಕದ ಬಗ್ಗೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ತೊಗರಿ ಮಾರಾಟ ಮಾಡಿರುವ ಬಗ್ಗೆ, ದಾಲ್ ಮಿಲ್ ಗಳಿಗೆ ತೊಗರಿ ಸರಬರಾಜು ಮಾಡಿರುವ ಬಗ್ಗೆ ಪರಿಶೀಲಿಸಿ, ತಾಲ್ಲೂಕುವಾರು ಹಿಂದಿನ ಸಾಲಿನೊಂದಿಗೆ ತುಲನೆ ಮಾಡಿ ಒಂದು ವೇಳೆ ಹಿಂದಿನ ಸಾಲಿಗೆ ಹೋಲಿಸಿದಲ್ಲಿ, ಇಳುವರಿ ಹೆಚ್ಚಾಗಿದೆಯೇ ಅಥವಾ ಕಡಿಮೆಯಾಗಿದೆಯೇ? ಎಂಬ ಬಗ್ಗೆ, ಸ್ಪಷ್ಟ ಅಭಿಪ್ರಾಯ ನೀಡುವಂತೆ ಹೇಳಿದರು.
ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್ ಪಟೇಲ್, ಕೃಷಿ, ತೋಟಗಾರಿಕೆ, ರೇಷ್ಮೆ, ಭೂ ದಾಖಲೆಗಳು ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಖಾಸಗಿ ಹಾಗೂ ಸಹಕಾರಿ ಬ್ಯಾಂಕುಗಳ, ಖಾಸಗಿ ಸಕ್ಕರೆ ಕಾರ್ಖಾನೆಗಳ ಮತ್ತು ನಬಾರ್ಡ್ ಹಿರಿಯ ಅಧಿಕಾರಿಗಳು ಸಹ ಉಪಸ್ಥಿತರಿದ್ದರು.







