Kalaburagi | ಸೊಲಾಪುರ ರೈಲು ನಿಲ್ದಾಣದಲ್ಲಿ ಟಿಟಿಇಗಳಿಗೆ ಅಗ್ನಿ ಸುರಕ್ಷತಾ ತರಬೇತಿ

ಕಲಬುರಗಿ : ಪ್ರಯಾಣಿಕರ ಸುರಕ್ಷತೆ ಹಾಗೂ ತುರ್ತು ಪರಿಸ್ಥಿತಿಗಳಲ್ಲಿ ತಕ್ಷಣ ಸ್ಪಂದಿಸುವ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ಮಧ್ಯ ರೈಲ್ವೆಯ ಸೊಲಾಪುರ ವಿಭಾಗವು ಮೇ 23ರಂದು ಸೊಲಾಪುರ ರೈಲು ನಿಲ್ದಾಣದಲ್ಲಿ ಟಿಟಿಇಗಳಿಗೆ ವಿಶೇಷ ಅಗ್ನಿ ಸುರಕ್ಷತಾ ಹಾಗೂ ತುರ್ತು ಪ್ರತಿಕ್ರಿಯೆ ತರಬೇತಿ ಕಾರ್ಯಕ್ರಮ ಆಯೋಜಿಸಿತು.
ರೈಲುಗಳಲ್ಲಿ ಸಂಭವಿಸಬಹುದಾದ ಅಗ್ನಿ ಅವಘಡಗಳ ವೇಳೆ ಟಿಟಿಇಗಳು ಮೊದಲ ರಕ್ಷಣಾ ಪಡೆ ಹಾಗೂ ಮೊದಲ ಪ್ರತಿಕ್ರಿಯಾಕಾರರಾಗಿ ಕಾರ್ಯನಿರ್ವಹಿಸುವ ಹಿನ್ನೆಲೆಯಲ್ಲಿ ಈ ತರಬೇತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಡ್ರೈ ಕೆಮಿಕಲ್ ಪೌಡರ್ (ಡಿಸಿಪಿ) ಹಾಗೂ ಕಾರ್ಬನ್ ಡೈಆಕ್ಸೈಡ್ (CO₂) ಅಗ್ನಿಶಾಮಕಗಳ ಬಳಕೆ, ಅವುಗಳ ವರ್ಗೀಕರಣ ಮತ್ತು ಕ್ಲಾಸ್ A, B, C, D ಹಾಗೂ F ವಿಧದ ಅಗ್ನಿ ಅವಘಡಗಳನ್ನು ನಿಯಂತ್ರಿಸುವ ವಿಧಾನಗಳ ಕುರಿತು ವಿವರಿಸಲಾಯಿತು.
ಅಗ್ನಿಶಾಮಕ ಉಪಕರಣಗಳ ಸುರಕ್ಷಿತ ಬಳಕೆ, ತುರ್ತು ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ಪ್ರಯಾಣಿಕರ ಸ್ಥಳಾಂತರ, ಜನಸ್ತೋಮ ನಿಯಂತ್ರಣ ಹಾಗೂ ಅಗ್ನಿ ಅವಘಡಗಳ ತಕ್ಷಣದ ವರದಿ ಕುರಿತು ಸಿಬ್ಬಂದಿಗೆ ಪ್ರಾಯೋಗಿಕ ತರಬೇತಿ ನೀಡಲಾಯಿತು.
ಈ ವೇಳೆ ಸುರಕ್ಷತಾ ವಿಭಾಗವು ಫೈರ್ ಅಂಡ್ ಸ್ಮೋಕ್ ಡಿಟೆಕ್ಷನ್ ಸಿಸ್ಟಮ್ (FSDS), ಅಲಾರ್ಮ್ ಚೈನ್ ಪುಲ್ಲಿಂಗ್ (ACP) ಹಾಗೂ ಫೇಲ್ಯರ್ ಇಂಡಿಕೇಶನ್ ಕಮ್ ಬ್ರೇಕ್ ಅಪ್ಲಿಕೇಶನ್ (FIBA) ವ್ಯವಸ್ಥೆಗಳ ಕುರಿತು ವಿಶೇಷ ತರಬೇತಿ ವಿಡಿಯೋ ಪ್ರದರ್ಶಿಸಿತು.
ಸುರಕ್ಷತಾ ಸಲಹೆಗಾರರು ಸಿಬ್ಬಂದಿಯ ಪ್ರಶ್ನೆಗಳಿಗೆ ಉತ್ತರ ನೀಡಿ, ನೈಜ ತುರ್ತು ಪರಿಸ್ಥಿತಿಗಳಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಮಾರ್ಗದರ್ಶನ ನೀಡಿದರು.






