ಕಲಬುರಗಿ: ಗರ್ಭಿಣಿ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ, ಔಷಧ ವಿತರಣೆ

ಕಲಬುರಗಿ: ಆಳಂದ ತಾಲೂಕಿನ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನ ಘಟಕ ಸನ್ನಿಧಿ ಸಮಾಜ ಸೇವಾ ಕೇಂದ್ರ ಕಡಗಂಚಿ, ಸುಜಾನಿ ತಾಯಿ ಮತ್ತು ಶಿಶುವಿನ ಆಸ್ಪತ್ರೆ, ಕಲಬುರಗಿ ಸಹಯೋಗದಲ್ಲಿ ಗರ್ಭಿಣಿ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧ ವಿತರಣೆ ಶಿಬಿರವನ್ನು ಕಡಗಂಚಿ ಆರೋಗ್ಯ ಕೇಂದ್ರದಲ್ಲಿ ನಡೆಯತು.
ಕಾರ್ಮೆಲ್ ಜ್ಯೋತಿ ಟ್ರಸ್ಟ್ನ ಕಾರ್ಯದರ್ಶಿ ಹಾಗೂ ಶಿಬಿರದ ಆಯೋಜಕರಾದ ಫಾ. ವಿಲಿಯಂ ಮಿರಾಂದ ಅವರು ಮಾತನಾಡಿ, "ಗರ್ಭಧಾರಣೆಯ ಅವಧಿಯಲ್ಲಿ ಮಹಿಳೆಯ ಆರೋಗ್ಯ ಅತ್ಯಂತ ಮುಖ್ಯ. ಸಮತೋಲನಯುಕ್ತ ಆಹಾರ, ಸರಿಯಾದ ವಿಶ್ರಾಂತಿ ಮತ್ತು ಚಿಂತಾಮುಕ್ತ ಜೀವನ ಇದನ್ನು ಸುಖಕರಗೊಳಿಸುತ್ತದೆ. ತಾಯಿಯ ಪ್ರೀತಿ, ಮಮತೆ ಮತ್ತು ಸಹನೆ ಮಗುವಿನ ಭವಿಷ್ಯ ಬೆಳಗಿಸುತ್ತದೆ" ಎಂದು ಹೇಳಿದರು.
ಸುಜಾನಿ ತಾಯಿ ಮತ್ತು ಶಿಶುವಿನ ಆಸ್ಪತ್ರೆಯ ನಿಪುಣ ವೈದ್ಯರ ತಂಡ ಈ ಶಿಬಿರದಲ್ಲಿ ಭಾಗವಹಿಸಿ, ತಪಾಸಣೆ ನಡೆಸಿ, ಸಲಹೆ ಮತ್ತು ಅಗತ್ಯ ಔಷಧಿಗಳನ್ನು ವಿತರಿಸಿದರು.
ಶಿಬಿರದಲ್ಲಿ ಡಾ. ಚಂದ್ರಿಕಾ, ಡಾ.ಫರಿಹ, ವೆಂಕಟೇಶ್, ಅನಿಲ್, ವಿಜಯಲಕ್ಷ್ಮಿ, ಬ್ರದರ್ ಮೆಲ್ರಿಕ್, ಅಕ್ಷತಾ, ಸವಿತಾ, ಡಾ. ಶಿಲ್ಪ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಈ ಶಿಬಿರದ ಸದುಪಯೋಗವನ್ನು 89 ಗರ್ಭಿಣಿ ಮಹಿಳೆಯರು ಪಡೆದುಕೊಂಡು, ಅವಶ್ಯಕತೆ ಇದ್ದವರಿಗೆ ಉಚಿತ ಔಷಧ ವಿತರಿಸಲಾಯಿತು.