ಕಲಬುರಗಿ | ಜರ್ಮನಿ ಸಂಸ್ಥೆಗೆ ಜಿಟಿಟಿಸಿ ವಿದ್ಯಾರ್ಥಿಗಳ ಆಯ್ಕೆ

ಕಲಬುರಗಿ: ಕರ್ನಾಟಕ ಮತ್ತು ಜರ್ಮನಿ ನಡುವೆ ಕೌಶಲ್ಯಪೂರ್ಣ ಸಹಕಾರ ಸಂಬಂಧ ವೃದ್ಧಿಸಲು ಮಹತ್ವದ ಹೆಜ್ಜೆ ಇಡಲಾಗಿದೆ. ಈ ನಿಟ್ಟಿನಲ್ಲಿ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ (ಜಿಟಿಟಿಸಿ) ಐವರು ವಿದ್ಯಾರ್ಥಿಗಳನ್ನು ಜರ್ಮನಿಯ ಡಸೆಲ್ಟಾರ್ಫ್‌ನ ಪ್ರಮುಖ ಸಾರ್ವಜನಿಕ ಸಾರಿಗೆ ಸಂಸ್ಥೆಯಾದ ರೈನ್‌ಬಾನ್ ಎಜಿ ಉದ್ಯೋಗಕ್ಕೆ ಆಯ್ಕೆ ಮಾಡಿಕೊಂಡಿದೆ.
ವಿಕಾಸಸೌಧದಲ್ಲಿ ನಡೆದ ಸಮಾರಂಭದಲ್ಲಿ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ರೈನ್‌ಬಾನ್ ಎಜಿ ನೀಡಿದ ಒಪ್ಪಿತ ಪತ್ರಗಳನ್ನು (ಎಲ್‌ಓಐ) ಐವರು ಅಭ್ಯರ್ಥಿಗಳಿಗೆ ಹಸ್ತಾಂತರಿಸಿದರು.
ಈಗ ಆಯ್ಕೆಯಾದ ಜಿಟಿಟಿಸಿ ಅಭ್ಯರ್ಥಿಗಳು ಡಸೆಲ್ನಾರ್ಫ್ ರೈನ್‌ಬಾನ್ ಎಜೆಯಲ್ಲಿ ತರಬೇತಿ ಪಡೆದು, ವಿಶ್ವದರ್ಜೆಯ ಕೈಗಾರಿಕಾ ಅನುಭವ ಮತ್ತು ಔಪಚಾರಿಕ ಜರ್ಮನ್ ಪ್ರಮಾಣೀಕರಣ ಪಡೆಯಲಿದ್ದಾರೆ. ಇದು ರಾಜ್ಯಕ್ಕೆ ಹೆಮ್ಮೆಯ ಕ್ಷಣ. ನಮ್ಮ ಯುವಕರು ವಿಶ್ವದ ಅತ್ಯುತ್ತಮರೊಂದಿಗೆ ಸ್ಪರ್ಧಿಸುವ ಪ್ರತಿಭೆ ಮತ್ತು ಶಿಸ್ತನ್ನು ಹೊಂದಿದ್ದಾರೆ. ಇಂತಹ ಅಂತರರಾಷ್ಟ್ರೀಯ ಪಾಲುದಾರಿಕೆಗಳ ಮೂಲಕ ಕೌಶಲ್ಯಪೂರ್ಣ ಯುವಕ-ಯುವತಿಯರಿಗೆ ಜಾಗತಿಕ ಅವಕಾಶಗಳನ್ನು ಒದಗಿಸಲು ನಮ್ಮ ಸರಕಾರ ಬದ್ಧವಾಗಿದೆ. ಇದು ಸುದೀರ್ಘ ಪ್ರಯಾಣದ ಆರಂಭ ಮಾತ್ರ ಎಂದು ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದರು.






