ಕಲಬುರಗಿ | ಆಶಾ ಕಾರ್ಯಕರ್ತೆಯರಿಂದ ಲಂಚ ಪಡೆದುಕೊಂಡ ಆರೋಗ್ಯ ಇಲಾಖೆಯ ಸಿಬ್ಬಂದಿ : ಆರೋಪ, ವಿಡಿಯೋ ವೈರಲ್

ಕಲಬುರಗಿ: ಆರೋಗ್ಯ ಇಲಾಖೆಯ ಸಿಬ್ಬಂದಿಯೊರ್ವರು ಆಶಾ ಕಾರ್ಯಕರ್ತೆಯರಿಂದ ಲಂಚ ತೆಗೆದುಕೊಂಡು ಕೆಲಸ ಮಾಡಿಕೊಡುತ್ತಿರುವ ಘಟನೆಯ ವೀಡಿಯೋ ವೈರಲ್ ಆಗಿದೆ.
ಚಿಂಚೋಳಿ ತಾಲ್ಲೂಕಿನ ಸುಲೇಪೇಟ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಿರಿಯ ಪ್ರಯೋಗಶಾಲಾ ತಂತ್ರಜ್ಞ(LTO) ಜಗನ್ನಾಥ್ ಎಂಬವರು ಆರ್‌ಸಿಎಚ್ ಪೋರ್ಟಲ್ ನಲ್ಲಿ ನೋಂದಣಿ ಮಾಡುವ ಸಲುವಾಗಿ ಆಶಾ ಕಾರ್ಯಕರ್ತೆಯರಿಂದ ಹಣ ವಸೂಲಿ ಮಾಡಿರುವ ಸಿಬ್ಬಂದಿಯಾಗಿದ್ದಾರೆ.
ಆಶಾ ಕಾರ್ಯಕರ್ತೆಯರು, ಸಾರ್ವಜನಿಕರ ಅಥವಾ ಗರ್ಭಿಣಿಯರ ಉಗುಳು ಪರೀಕ್ಷೆ, ಕಫಾ ಪರೀಕ್ಷೆಗಾಗಿ ಸ್ಯಾಂಪಲ್ ತಂದು ಕೊಟ್ಟಿದ್ದಕ್ಕಾಗಿ ಅದರ ಪರೀಕ್ಷೆ ಮಾಡಲು ಮತ್ತು ಆರ್‌ಸಿಎಚ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಲು ನೂರು ರೂ. ಬೇಡಿಕೆ ಇಟ್ಟಿರುವ ವೀಡಿಯೊ ಹರಿದಾಡುತ್ತಿದೆ.
ಸುಲೇಪೇಟ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಿರಿಯ ಪ್ರಯೋಗಶಾಲಾ ತಂತ್ರಜ್ಞ(IUL) ಜಗನ್ನಾಥ್, ಸರಕಾರಿ ಉದ್ಯೋಗಿಯಾಗಿದ್ದರೂ ಸೇಡಂನಲ್ಲಿ ಖಾಸಗಿಯಾಗಿ ಲ್ಯಾಬ್ ಹೊಂದಿದ್ದಾರೆ ಎಂದು ಇಲಾಖೆಯ ಹೆಸರು ಹೇಳಲಿಚ್ಛಿಸದಿರುವ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸಂಪರ್ಕಿಸಲಾಗಿತ್ತು. ಅವರು ಕರೆ ಸ್ವೀಕರಿಸಲಿಲ್ಲ.
ಲಂಚ ಪಡೆದುಕೊಂಡು ಕೆಲಸ ಮಾಡಿಕೊಡುತ್ತಿರುವ ಬಗ್ಗೆ ವಿಡಿಯೊ ವೈರಲ್ ಆಗಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ತಿಳಿಸಿದ್ದೇನೆ. ಸಿಬ್ಬಂದಿ ಜಗನ್ನಾಥ್ ಅವರಿಗೆ ಕಾರಣ ಕೇಳಿ ಗುರುವಾರ ಶೋಕಾಸ್ ನೋಟಿಸ್ ಕೂಡ ಕೊಟ್ಟಿದ್ದೇವೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ.
- ಡಾ.ಎಂ.ಡಿ. ಗಫರ್, ಚಿಂಚೋಳಿ ತಾಲೂಕು ಆರೋಗ್ಯಾಧಿಕಾರಿ







