ಕಲಬುರಗಿ| ʼನಮ್ಮ ಸರಸ್ ಮೇಳʼದ ಮಳಿಗೆಗಳಿಗೆ ಹೈಕೋರ್ಟ್ ನ್ಯಾಯಾಧೀಶರ ಭೇಟಿ

ಕಲಬುರಗಿ : ಕಲಬುರಗಿಯ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಮಹಿಳಾ ಸ್ವ-ಸಹಾಯ ಗುಂಪುಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ʼನಮ್ಮ ಸರಸ್ ಮೇಳʼಕ್ಕೆ ಬುಧವಾರ ಸಂಜೆ ಕಲಬುರಗಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಭೇಟಿ ನೀಡಿ ಮಾರಾಟ ಮಳಿಗೆಗಳನ್ನು ವೀಕ್ಷಿಸಿ, ಅಚ್ಚುಕಟ್ಟಾದ ನಿರ್ವಹಣೆ ಮಾಡಿದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಲಬುರಗಿ ಹೈಕೋರ್ಟ್ ಪೀಠದ ನ್ಯಾಯಧೀಶರುಗಳಾದ ನ್ಯಾ.ಸುನಿಲ್ ದತ್ತ್ ಯಾದವ್, ನ್ಯಾ.ರಾಜೇಶ್ ರೈ, ನ್ಯಾ.ವಿಶ್ವಜಿತ್ ಶೆಟ್ಟಿ ಹಾಗೂ ನ್ಯಾ.ಆರ್. ನಟರಾಜ್ ಅವರು, ಪ್ರತಿ ಮಳಿಗೆಗೆ ಭೇಟಿ ನೀಡಿ ಮಾರಾಟ ವಸ್ತುಗಳ ಮಾಹಿತಿ ಪಡೆದುಕೊಂಡರು. ಬಳಿಕ ಅಕ್ಕಾ ಕೆಫೆಗೆ ಭೇಟಿ ನೀಡಿ ಅಲ್ಲಿನ ತಿಂಡಿ ತಿನಿಸುಗಳನ್ನು ಸವಿದು ರುಚಿ ಹಾಗೂ ಶುಚಿತ್ವದ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.
ಬ್ರಾಂಡಿಂಗ್, ಪ್ಯಾಕೇಜಿಂಗ್, ಮಾರುಕಟ್ಟೆ ಅವಕಾಶಗಳು ಹಾಗೂ ಗ್ರಾಹಕರ ಸಂಬಂಧಗಳ ಕುರಿತು ಮತ್ತು ಉತ್ತಮ ಅಭ್ಯಾಸಗಳ ಅನುಷ್ಠಾನ ಕುರಿತು ಆಯೋಜಿಸಿದ ವಿಚಾರ ಸಂಕಿರಣದಲ್ಲಿ ಎನ್.ಆರ್.ಎಲ್.ಎಂ ಸಂಯೋಜಕರಾದ ಆನಂದ ಭಾರದ್ವಾಜ್ ಮತ್ತು ಪ್ರೀತಮ್ ಅವರು ತಮ್ಮ ಅನುಭವ ಹಂಚಿಕೊಂಡರು. ಸೆಮಿನಾರ್‌ನಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಸ್ವಸಹಾಯ ಸಂಘದ ಮಹಿಳೆಯರು ತಮಗಿದ್ದ ಸಂಶಯಗಳನ್ನು ಬಗೆಹರಿಸಿಕೊಂಡರು.
ಮುಸ್ಸoಜೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ರಘುಪತಿ ಝಾ ಮತ್ತು ಅವರ ತಂಡದಿಂದ ಗಜಲ್ ಗಾಯನ ನಡೆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು, ಉಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳಿಗೆ ಮತ್ತು ಕಾರ್ಯಕ್ರಮ ನೀಡಿದ ಖ್ಯಾತ ಗಾಯಕನಿಗೆ ಕಿರುಕಾಣಿಕೆ ನೀಡಿ ಗೌರವಿಸಿದರು. ಎನ್.ಆರ್.ಎಲ್.ಎಂ. ಉಪನಿರ್ದೇಶಕ ಜಗನ್ನಾಥ ಉಪಸ್ಥಿತರಿದ್ದರು.







