ಕಲಬುರಗಿ | ಡ್ರಗ್ಸ್ ಸಾಗಾಟದಲ್ಲಿ ನನ್ನ ಪಾತ್ರವಿಲ್ಲ : ಉಚ್ಚಾಟಿತ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ಕಣ್ಣಿ

ಲಿಂಗರಾಜ ಕಣ್ಣಿ
ಕಲಬುರಗಿ : ಮಹಾರಾಷ್ಟ್ರದಲ್ಲಿ ಡ್ರಗ್ಸ್ ಸಾಗಾಟ ಎಂಬ ನೆಪ ಇಟ್ಟುಕೊಂಡು ಅಲ್ಲಿನ ಪೊಲೀಸರು ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ, ಈ ಪ್ರಕರಣದಲ್ಲಿ ನನ್ನದೇನೂ ಪಾತ್ರವಿಲ್ಲ ಎಂದು ಕಲಬುರಗಿ ದಕ್ಷಿಣ ಉಚ್ಚಾಟಿತ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ಕಣ್ಣಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 20 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ. ನಾನು ಯಾವುದೇ ಸಮಾಜಘಾತುಕ ಕೆಲಸದಲ್ಲಿ ತೊಡಗಿಲ್ಲ. ಇರ್ಫಾನ್ ಸ್ನೇಹಿತ ತೌಸಿಫ್ ಮಧ್ಯೆ ಹಗೆತನ ಇತ್ತು. ಆ ಹಗೆತನಕ್ಕಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದ. ತೌಸಿಫ್ ಮೇಲೆ ಯಾವ ಕೇಸ್ ಇತ್ತು ಗೊತ್ತಿಲ್ಲ. ಬಝಾರ್ ಪೇಟೆ ಪೊಲೀಸರು ನಮ್ಮನ್ನು ಬಂಧಿಸಿದ್ದರು. ಅದರಲ್ಲಿ ನನ್ನದೇನೂ ಪಾತ್ರವಿಲ್ಲ ಅಂತ ಹೇಳಿದ್ದರೂ ಅವರೇ ಏಕಾಏಕಿ ಕೆಲ ಕಾಪ್ ಸಿರಪ್ ಬಾಟಲ್ ತಂದು ಇಟ್ಟು ಪಂಚನಾಮೆ ಮಾಡಿದ್ದಾರೆ ಎಂದರು.
ಕಲಬುರಗಿಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಯಾರು ಏನೇ ಮಾಡಿದರೂ, ಅದಕ್ಕೆ ಪ್ರಿಯಾಂಕ್ ಖರ್ಗೆ ಅವರ ಹೆಸರು ಬರುತ್ತೆ. ನಾನು ಯಾವತ್ತು ಪ್ರಿಯಾಂಕ್ ಖರ್ಗೆ ಅವರ ಬಳಿ ಹೋಗಿಲ್ಲ. ಪಕ್ಷ ಉಚ್ಚಾಟನೆ ಮಾಡಿದೆ ಅದನ್ನು ಸ್ವಾಗತಿಸುತ್ತೇನೆ. ನನ್ನಿಂದ ನಮ್ಮ ನಾಯಕರಿಗೆ ಪಕ್ಷಕ್ಕೆ ಹಾನಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಪ್ರಕರಣ ಸಿಬಿಐಗೆ ವಹಿಸಲಿ:
ನನ್ನ ವಿರುದ್ಧ ಬಿಜೆಪಿಯವರು ಸುಖಾ ಸುಮ್ಮನೆ ಆರೋಪ ಮಾಡಿದ್ದಾರೆ. ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ಗೆ ಚಾಲೆಂಜ್ ಮಾಡುತ್ತೇನೆ. ಮಹಾರಾಷ್ಟ್ರದಲ್ಲಿ ನಿಮ್ಮದೇ ಸರ್ಕಾರವಿದೆ. ನಿಮಗೆ ತಾಕತ್ ಇದ್ದರೆ ಪ್ರಕರಣವನ್ನು ಸಿಬಿಐಗೆ ಕೊಡಿಸಿ ಎಂದು ಅವರು ಸವಾಲು ಹಾಕಿದ್ದಾರೆ.







