ಕಲಬುರಗಿ | ಬೀಜ, ರಸಗೊಬ್ಬರ, ಕೀಟನಾಶಕಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಸೂಕ್ತ ಕ್ರಮ: ಸಮದ್ ಪಟೇಲ್

ಕಲಬುರಗಿ: ಕಲಬುರಗಿ ಜಿಲ್ಲೆಯ ಎಲ್ಲಾ ಕೃಷಿ ಪರಿಕರ ಮಾರಾಟಗಾರರು ಬೀಜ, ರಸಗೊಬ್ಬರ ಮತ್ತು ಕೀಟನಾಶಕ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದೆಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರಾದ ಸಮದ್ ಪಟೇಲ್ ಅವರು ಕೃಷಿ ಪರಿಕರ ಮಾರಾಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಅವರು ಸೋಮವಾರ ಕಲಬುರಗಿ ಜಿಲ್ಲಾ ಪಂಚಾಯತ್ (ಹಳೆ) ಸಭಾಂಗಣದಲ್ಲಿ ಕಲಬುರಗಿ ಜಿಲ್ಲೆಯ ಕೃಷಿ ಪರಿಕರ (ಬೀಜ, ರಸಗೊಬ್ಬರ ಮತ್ತು ಕೀಟನಾಶಕ) ವಿತರಕರೊಂದಿಗೆ ಸಭೆ ನಡೆಸಿ ಮಾತನಾಡಿ, ಪ್ರಸ್ತಕ ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಶೇ.90 ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಬೀಜ ಮತ್ತು ರಸಗೊಬ್ಬರದ ದಾಸ್ತಾನು ಸಾಕಷ್ಟು ಇದ್ದು, ಯಾವುದೇ ರೀತಿಯ ಕೊರತೆ ಇರುವುದಿಲ್ಲ ಎಂದರು.
ರೈತರಿಗೆ ಅನುಕೂಲವಾಗುವಂತೆ ಪ್ರತಿ ಬೀಜ, ಗೊಬ್ಬರ, ಕೀಟನಾಶಕಗಳ ದಾಸ್ತಾನು ಹಾಗೂ ದರಪಟ್ಟಿಯನ್ನು ತಮ್ಮ ತಮ್ಮ ಅಂಗಡಿಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ದಾಸ್ತಾನು ರಿಜಿಸ್ಟರ್ ಬರೆಯಬೇಕು. ರಜಿಸ್ಟರ್ ನಲ್ಲಿರುವ ದಾಸ್ತಾನಕ್ಕೂ ಭೌತಿಕ ದಾಸ್ತಾನಕ್ಕೂ ಸರಿಹೊಂದುವಂತಿರಬೇಕು. ಕಡ್ಡಾಯವಾಗಿ ಪಾಯಿಂಟ್ ಆಪ್ ಸೇಲ್ ಮಶೀನ್ (ಪಾಸ್ ಮಶೀನ) ಬಳಕೆಮಾಡಿ ರಸಗೊಬ್ಬರ ಮಾರಾಟ ಮಾಡಬೇಕು. ರೈತರ ಸಹಿ ಪಡೆದು ಅವರಿಗೆ ಕಡ್ಡಾಯವಾಗಿ ರಶೀದಿ ಕೊಡಬೇಕು ಎಂದರು.
ರಸಗೊಬ್ಬರ ನಿಯಂತ್ರಣ ಆದೇಶ, ಬೀಜ ಕಾಯ್ದೆ ಮತ್ತು ನಿಯಮಗಳು ಸೇರಿದಂತೆ ಕೃಷಿ ಪರಿಕರ ಮಾರಾಟಕ್ಕೆ ಸಂಬಂಧಿಸಿದ ಕಾಯ್ದೆಗಳನ್ನು ಪಾಲನೆ ಮಾಡುವ ಮೂಲಕ ಮಾರಾಟಗಾರರು ತಮ್ಮ ವಹಿವಾಟು ನಡೆಸುವಂತೆ ತಿಳಿಸಲಾಯಿತು. ಅನಾವಶ್ಯಕವಾಗಿ ಸರ್ಕಾರದ ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿಗೊಬ್ಬರ, ಬೀಜ, ಕೀಟನಾಶಕ ಮಾರಾಟ ಮಾಡುವುದು ಕಂಡುಬಂದರೆ ಅಂತಹ ಮಾರಾಟಗಾರರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಯಾವುದೇ ಕಾರಣಕ್ಕೂ ಬೀಜ ಮತ್ತು ರಸಗೊಬ್ಬರದ ಕೃತಕ ಅಭಾವ ಸೃಷ್ಟಿಯಾಗದಂತೆ ನೋಡಿಕೊಳ್ಳುವುದರ ಜೊತೆಗೆ ರೈತಬಾಂಧವರಿಗೆ ಅನ್ಯಾಯವಾಗದಂತೆ ಕೃಷಿ ಪರಿಕರಗಳನ್ನು ಮಾರಾಟ ಮಾಡಬೇಕೆಂದು ಎಂದು ಎಚ್ಚರಿಕೆ ನೀಡಿದ ಅವರು, ತಮ್ಮ ಅಂಗಡಿಗಳಿಗೆ ಬರುವ ರೈತಬಾಂಧವರೊಂದಿಗೆ ಸೌಜನ್ಯಯುತವಾಗಿ ವರ್ತಿಸಿ ಸಕಾರಾತ್ಮಕತೆಯಿಂದ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.
ಡಿಎಪಿ (DAP) ಮತ್ತು ಯೂರಿಯಾ (UREA) ರಸಗೊಬ್ಬರಕ್ಕೆ ಪರ್ಯಾಯವಾಗಿ ತೊಗರಿ, ಉದ್ದು, ಹೆಸರು, ಹತ್ತಿ ಮತ್ತು ಕಬ್ಬು ಬೆಳೆಗೆ ಗಂಧಕ ಅಂಶ ಒದಗಿಸುವ ಸಂಯುಕ್ತ ರಸಗೊಬ್ಬರಗಳಾದ 20:20:0:13 ಹಾಗೂ ಸಮತೋಲನ ಪೋಷಕಾಂಶ ನೀಡುವ ಮತ್ತು ಭೂಮಿಯ ಆರೋಗ್ಯಕ್ಕೆ ಹಿತವಾದ ಸಂಯುಕ್ತ ಗೊಬ್ಬರಗಳಾದ 14:35:14, 15:15:15, 10:26:26, 12:32:16, 22:22:11, 14:35:14, 17:17:17, 14:28:14, 19:19:19, 20:10:10, 15:15:15, 15:15:15:9(S) ಇತ್ಯಾದಿ ರಸಗೊಬ್ಬರಗಳನ್ನು ಬಳಸಬೇಕು. ಇದರಿಂದ ಮಣ್ಣಿನ ಆರೋಗ್ಯದಲ್ಲಿ ಸುಧಾರಣೆ ಮತ್ತು ಭೂಮಿಯ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಉತ್ತಮ ಇಳುವರಿ ಪಡೆಯಲು ಸಹಕಾರಿಯಾಗುತ್ತದೆ ಎಂದು ರೈತರಿಗೆ ಅರಿವು ಮೂಡಿಸಲು ಕೃಷಿ ಪರಿಕರ ಮಾರಾಟಗಾರರಿಗೆ ಸೂಚಿಸಿದರು.
ಸಭೆಯಲ್ಲಿ ಉಪ ಕೃಷಿ ನಿರ್ದೇಶಕರು, ಕಲಬುರಗಿ ತಾಲ್ಲೂಕಿನ ಎಲ್ಲಾ ಸಹಾಯಕ ಕೃಷಿ ನಿರ್ದೇಶಕರು, ಸಹಾಯಕ ಕೃಷಿ ನಿರ್ದೇಶಕರು, (ಜಾರಿದಳ), ಕಲಬುರಗಿ, ಕೃಷಿ ಅಧಿಕಾರಿಗಳು, ಜಿಲ್ಲೆಯ ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷರು, ಪಧಾದಿಕಾರಿಗಳು ಹಾಗೂ ಜಿಲ್ಲೆಯ ಕೃಷಿ ಪರಿಕರ ವಿತರಕರು ಉಪಸ್ಥಿತರಿದ್ದರು.







