ಕಲಬುರಗಿ | ಆಯುರ್ವೇದ ಪದ್ದತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಡಿಸಿ ಫೌಝಿಯಾ ತರನ್ನುಮ್

ಕಲಬುರಗಿ: ಆಯುರ್ವೇದ ವಿಜ್ಞಾನವು ಜೀವನಕ್ಕೆ ಅಮೂಲ್ಯವಾದದ್ದು, ಈ ಪರಂಪರೆಯನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಲಬುರಗಿ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಹೇಳಿದರು.
ಮಂಗಳವಾರ ಕಲಬುರಗಿ ಜಿಲ್ಲಾ ವಿಜ್ಞಾನ ಕೇಂದ್ರ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆಯುಷ್ ಇಲಾಖೆ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ ಧನ್ವಂತರಿ ಜಯಂತಿ ನಿಮಿತ್ಯ 10ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಕಲಬುರಗಿ ಜಿಲ್ಲೆಯ ಆಯುಷ್ ಇಲಾಖೆಯು ವಿನೂತನ ಕಾರ್ಯಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಕರ್ನಾಟಕದ ಇತರೆ ಜಿಲ್ಲೆಗಳಿಗೆ ಮಾದರಿಯಾಗಬೇಕು ಎಂದರು.
ಆಯುಷ್ ಇಲಾಖೆ ಶಾಲೆ, ಕಾಲೇಜುಗಳು ಹಾಗೂ ಸಾರ್ವಜನಿಕರಿಗೆ ಆಯುರ್ವೇದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ಯೋಗ ಕಾರ್ಯಕ್ರಮಗಳು ನೆರವೇರಿದವು.
ಜಿಲ್ಲಾ ಆಯುಷ್ ಇಲಾಖೆಯಿಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕಲಬುರಗಿ ವಿಭಾಗ-1 ವ್ಯಾಪ್ತಿಯಲ್ಲಿ ಸಿಬ್ಬಂದಿ, ಕಾರ್ಮಿಕರು ಮತ್ತು ಸಾರ್ವಜನಿಕರಿಗೆ ಉಚಿತ ಆಯುರ್ವೇದ ಆರೋಗ್ಯ ಶಿಬಿರವನ್ನು ಆಯೋಜಿಸಿ 176 ಜನರಿಗೆ ಚಿಕಿತ್ಸೆ ನೀಡಲಾಯಿತು.
ಹಿರಿಯ ವೈದ್ಯರಾದ ಡಾ.ಶ್ರೀಶೈಲ್ ಪಾಟೀಲ್ ಮತ್ತು ಡಾ.ಮಲ್ಲಾರಾವ್ ಮಲ್ಲೆ ಆಯುರ್ವೇದ ಪದ್ದತಿಯ ಪುರಾತನತೆಯನ್ನು ಸಾರಿದರು.
ಕಾರ್ಯಕ್ರಮದಲ್ಲಿ ಕಲಬುರಗಿ ಶ್ರೀಹಿಂಗುಲಾಂಬಿಕಾ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕರು ಡಾ.ನಿರ್ಮಲಾ ಕೆಳಮನಿ, ಜಿಲ್ಲಾ ಸರ್ಕಾರಿ ಹೋಮಿಯೋಪತಿ ಮತ್ತು ಆಯುರ್ವೇದ ಸಂಯುಕ್ತ ಆಸ್ಪತ್ರೆ ತಜ್ಞ ವೈದ್ಯರು ಡಾ. ಶಿಲ್ಪಾ ಬಿರಾದಾರ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಗಿರಿಜಾ ಎಸ್.ಯು, ಡಾ.ಸುಧೀರ್ ಕುಳಗೇರಿ, ಅರುಂಧತಿ ಕುಲಕರ್ಣಿ ಹಾಗೂ ಡಾ.ಚಿದಾನಂದಮೂರ್ತಿ ಉಪಸ್ಥಿತರಿದ್ದರು.







