ಕಲಬುರಗಿ | ಮಿಲಾದುನ್ನಭಿ ಅಂಗವಾಗಿ ಸೆ.5, 6ರಂದು ‘ಇಸ್ಲಾಮಿಕ್ ಕಲಾ ಪ್ರದರ್ಶನ-2025’

ಕಲಬುರಗಿ: 'ಮಿಲಾದುನ್ನಭಿ' ಪ್ರಯುಕ್ತ 5ನೇ ಇಸ್ಲಾಮಿಕ್ ಕಲಾ ಪ್ರದರ್ಶನ ಮತ್ತು ವಿಚಾರಗೋಷ್ಠಿ ಸೆ.5 ಮತ್ತು 6ರಂದು ನಗರದ ಸಂತ್ರಾಸ್ ವಾಡಿಯ ಹಿದಾಯತ್ ಸೆಂಟರ್‌ನಲ್ಲಿ ನಡೆಯಲಿದೆ ಎಂದು ಕಲಾವಿದ ಮತ್ತು ಕಾರ್ಯಕ್ರಮದ ಸಂಚಾಲಕ ಮುಹಮ್ಮದ್ ಆಯಾಝುದ್ದೀನ್ ಪಟೇಲ್ ಹಾಗೂ ಸಂಯೋಜಕ ರೆಹಮಾನ್ ಪಟೇಲ್ ತಿಳಿಸಿದ್ದಾರೆ.
ಈ ಕುರಿತು ಜಂಟಿಯಾಗಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸುಮಾರು 40 ಕಲಾಕೃತಿಗಳು, ಚಿತ್ರಗಳು ಮತ್ತು ಛಾಯಾಚಿತ್ರಗಳು ಎರಡು ದಿನಗಳ ಪ್ರದರ್ಶನದಲ್ಲಿ ಸಾರ್ವಜನಿಕ ವೀಕ್ಷಣೆಗೆ ಲಭ್ಯವಿರಲಿವೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಇನ್ನೋವೇಟಿವ್ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಷನ್ಸ್ ಸಂಸ್ಥಾಪಕ ಅಧ್ಯಕ್ಷ ಝಮೀರ್ ಅಹ್ಮದ್ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಸಮಾಜ ಸೇವಕ ಲಕ್ಷ್ಮಣ ದಸ್ತಿ, ಪತ್ರಕರ್ತ ಪ್ರಭಾಕರ್ ಜೋಶಿ ಹಾಗೂ ಕೆಬಿಎನ್ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ.ಅಥರ್ ಮೊಯಿಝುದ್ದೀನ್ ಅವರು ಉಪಸ್ಥಿತರಿರಲಿದ್ದಾರೆ.
ಈ ಪ್ರದರ್ಶನವು ಸೆ.6ರಂದು ಸಂಜೆ 6 ಗಂಟೆಯವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರಲಿದೆ ಎಂದು ತಿಳಿಸಿದ್ದಾರೆ.





