ಕಲಬುರಗಿ | ಕಲ್ಯಾಣ ಕರ್ನಾಟಕ ಅಭಿವೃದ್ಧಿಯ ಕುರಿತು ಶ್ವೇತ ಪತ್ರ ಹೊರಡಿಸಲಿ: ನಿಖಿಲ್ ಕುಮಾರಸ್ವಾಮಿ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 13 ಸಾವಿರ ಕೋಟಿ ರೂ. ನೀಡಿ, ಅಭಿವೃದ್ಧಿ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ, ಎಲ್ಲಿ ಅಭಿವೃದ್ಧಿ ಆಗುತ್ತಿದೆ ಎನ್ನುವುದನ್ನು ರಾಜ್ಯ ಸರಕಾರ ಶ್ವೇತ ಪತ್ರ ಹೊರಡಿಸಲಿ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಕಲಬುರಗಿಯ ಜಿಲ್ಲಾ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಕೆಕೆಆರ್‌ಡಿಬಿ ಮೂಲಕ ಸಾಕಷ್ಟು ಪ್ರಮಾಣದ ಹಣವನ್ನು ಖರ್ಚು ಮಾಡಲಾಗುತ್ತಿದೆ ಎಂದು ಸಿದ್ದರಾಮಯ್ಯ ಅವರು ಯಾದಗಿರಿಯಲ್ಲಿ ಹೇಳಿದ್ದಾರೆ, ಆ ಹಣ ಎಲ್ಲಿ ಖರ್ಚಾಗುತ್ತಿದೆ ಎಂದು ಸ್ಪಷ್ಟಪಡಿಸಲಿ ಎಂದು ಹೇಳಿದರು.
ಕಲಬುರಗಿ ಜಿಲ್ಲೆಯ ಸೇಡಂ, ಚಿತ್ತಾಪುರ ಈ ಭಾಗದಲ್ಲಿ ಮರಳು ಮಾಫಿಯಾ ಹೆಚ್ಚು ನಡೆಯುತ್ತಿದೆ. ಸುಮಾರು 165 ಕೋಟಿ ರೂ. ಗೂ ಹೆಚ್ಚು ಅಕ್ರಮ ಮರಳುಗಾರಿಕೆ ನಡೆದಿದೆ. ಈ ಬಗ್ಗೆ ಇಲ್ಲಿನ ಜಿಲ್ಲಾಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ರಾಜ್ಯ ಸರಕಾರ ಕಂಡು ಕಾಣದೆ ಕುರುಡಾಗಿದೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಕಲಬುರಗಿ ಜಿಲ್ಲೆಯಲ್ಲಿ ಎಸೆಸೆಲ್ಸಿ ಫಲಿತಾಂಶ ನೋಡಿದರೆ ಸಂಪೂರ್ಣ ಕುಸಿದಿದೆ. ಇದರ ಬಗ್ಗೆ ಸರಕಾರ ಮುತುವರ್ಜಿ ವಹಿಸಬೇಕು, ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕೆಂದು ಹೇಳಿದರು.
'ಜೆಡಿಎಸ್ ಪಕ್ಷದ ಜನರೊಂದಿಗೆ ಜನತಾದಳ' ಅಭಿಯಾನ ಯಶಸ್ವಿಯಾಗಿ ಜರುಗುತ್ತಿದ್ದು, ಈವರೆಗೆ 4 ಲಕ್ಷ ಸದಸ್ಯರು ಮಿಸ್ಡ್ ಕಾಲ್ ಮೂಲಕ ನೋಂದಣಿಯಾಗಿದ್ದು, ಇದರಲ್ಲಿ 1 ಲಕ್ಷಕ್ಕೂ ಅಧಿಕ ಸಕ್ರಿಯ ಸದಸ್ಯರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಜೆಡಿಎಸ್ ಪಕ್ಷವನ್ನ ತಳಮಟ್ಟದಿಂದ ಕಟ್ಟುವ ಉದ್ದೇಶದಿಂದ ಜನರೊಂದಿಗೆ ಜನತಾದಳ ಪ್ರವಾಸ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಉತ್ತರ, ದಕ್ಷಿಣದಲ್ಲಿ ನೋಂದಣಿ ಆಭಿಯಾನ ನಡೆಯುತ್ತೆ ಎಂದ ಅವರು, ಆ.20ರ ನಂತರ ಹಳೇ ಮೈಸೂರು ಭಾಗದಲ್ಲಿ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿಯಲ್ಲಿ ಬೃಹತ್ ಸಮಾವೇಶ ನಡೆಸಲು ವರಿಷ್ಠರು ಚರ್ಚೆ ನಡೆಸಿದ್ದು, ಮುಂಬರುವ ದಿನಗಳಲ್ಲಿ ಈ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ವೆಂಕಟರಾವ ನಾಡಗೌಡ, ಶಾಸಕರಾದ ಶರಣಗೌಡ ಪಾಟೀಲ್ ಕಂದಕೂರ. ಜೆಡಿಎಸ್ ಪಕ್ಷದ ಕಲಬುರಗಿ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ, ಮಾಜಿ ಸಚಿವರಾದ ನಾಡಗೌಡರು, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೊಳ, ಮುಖಂಡರಾದ ಶಿವಕುಮಾರ್ ನಾಟಿಕಾರ್, ಕೃಷ್ಣ ರೆಡ್ಡಿ, ಮಹೇಶ್ವರಿ ವಾಲಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.







