ಕಲಬುರಗಿ | ಆಧುನಿಕ ಶಿಕ್ಷಣದಲ್ಲಿ ಮೌಲ್ಯಗಳ ಕೊರತೆಯಿಂದ ಸಮಾಜದಲ್ಲಿ ಅರಾಜಕತೆ ಸೃಷ್ಠಿ : ಬಟ್ಟು ಸತ್ಯನಾರಾಯಣ

ಕಲಬುರಗಿ : "ಮಾನವನ ಜೀವನವು ಸಂಪೂರ್ಣ ಭೌತಿಕಮಯವಾಗಿದೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಮಾನವೀಯ ಮೌಲ್ಯಗಳು, ನೈತಿಕತೆ ಮತ್ತು ನೀತಿಶಾಸ್ತ್ರದ ಕೊರತೆಯು ಸಮಾಜದಲ್ಲಿ ಹಲವಾರು ಸಾಮಾಜಿಕ ಸಮಸ್ಯೆಗಳನ್ನು ಹುಟ್ಟುಹಾಕಿದೆ. ಅಪರಾಧ, ಆತ್ಮಹತ್ಯೆಯಂತಹ ಘಟನೆಗಳು ಹೆಚ್ಚಾಗುತ್ತಿವೆ" ಎಂದು ಸಿಯುಕೆಯ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ಆಳಂದ ತಾಲೂಕಿನ ಕಡಗಂಚಿ ಬಳಿಯ ಸಿಯುಕೆಯಲ್ಲಿ ನವದೆಹಲಿಯ ಭಾರತೀಯ ಶಿಕ್ಷಣ ಮಂಡಳಿ (ಬಿಎಸ್‌ಎಂ) ಸಹಯೋಗದೊಂದಿಗೆ ಸಿಯುಕೆ ಆಯೋಜಿಸಿದ್ದ 'ʼಪ್ರಸ್ತುತ ಶೈಕ್ಷಣಿಕ ವಲಯದಲ್ಲಿ ಭಾರತೀಯ ಜ್ಞಾನ ಪರಂಪರೆಯ (ಐಕೆಎಸ್) ಪ್ರಸ್ತುತತೆʼ ಎಂಬ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
"ಭಾರತೀಯ ಜ್ಞಾನ ಪರಂಪರೆಯು ಮಾನವನ ಜೀವನದ ಸಾರವನ್ನು ಅರ್ಥಮಾಡಿಕೊಳ್ಳುವ ಮೂಲಕ ಜನರು ನೆಮ್ಮದಿಯ ಜೀವನವನ್ನು ಹೇಗೆ ನಡೆಸಬೇಕು ಮತ್ತು ಒತ್ತಡದ ಜೀವನದಿಂದ ಹೇಗೆ ಹೊರಬರಬೇಕು ಎಂಬುದನ್ನು ಕಲಿಸುತ್ತದೆ. ಐಕೆಎಸ್ ಅನ್ನು ಮರುಪರಿಶೀಲಿಸುವ ಮತ್ತು ಪ್ರಸ್ತುತ ಸನ್ನಿವೇಶದಲ್ಲಿ ಪರಿಸರ, ಸಾಮಾಜಿಕ, ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸುವ ಸಮಯ ಇದಾಗಿದೆ, ಏಕೆಂದರೆ ಐಕೆಎಸ್ ಮುಖ್ಯವಾಗಿ ಮಾನವ ಕಾಳಜಿಯ ಬಗ್ಗೆ ಮಾತನಾಡುತ್ತದೆ” ಎಂದು ಹೇಳಿದರು.
ಮುಖ್ಯ ಭಾಷಣಕಾರರಾದ ಪುಣೆಯ ಡಿಇಎಸ್ ವಿಶ್ವವಿದ್ಯಾಲಯದ ಭಾರತೀಯ ಜ್ಞಾನ ಪರಂಪರೆಯ ವಿಭಾಗದ ಮುಖ್ಯಸ್ಥರಾದ ಡಾ.ವಾಸುದೇವ್ ಐತಾಳ್ ಮಾತನಾಡಿದರು.
ಪ್ರೊ.ವೆಂಕಟೇಶ್ ರಾಯ್ಕರ್, ಕುಲಸಚಿವ ಆರ್.ಆರ್.ಬಿರಾದಾರ, ಸಿಯುಕೆಯ ಬಿಎಸ್‌ಎಂನ ಸಂಚಾಲಕ ಮತ್ತು ಗಣಕ ನಿಕಾಯದ ಡೀನ್ ಪ್ರೊ.ಆರ್.ಎಸ್.ಹೆಗಾಡಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರೊ.ಚನ್ನವೀರ, ಪ್ರೊ.ಬಸವರಾಜ ಡೋಣೂರ, ಪ್ರೊ.ಜಿ.ಆರ್.ಅಂಗಡಿ, ಡಾ.ದೇವರಾಜಪ್ಪ, ಡಾ.ರವಿ ಖಣಗಿ, ಡಾ.ರಾಜೀವ್ ಜೋಶಿ, ಡಾ.ಕವಿತಾ ಹಿರೇಮಠ, ಡಾ.ಲಕ್ಷ್ಮಣ, ಡಾ.ರೂಪಾರಾಣಿ, ಡಾ.ಉದಯ ಪಾಟೀಲ, ಡಾ.ಸಂಗಮೇಶ್, ಡಾ.ಉದಯ ಪಾಟೀಲ, ಡಾ.ಕಾರ್ತಿಕ್, ಶಿಕ್ಷಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಹಾಜರಿದ್ದರು.
ಡಾ.ದೀಪ್ತಿ ಸ್ವಾಗತಿಸಿದರು. ಡಾ.ಜಯದೇವಿ ಜಂಗಮಶೀಟಿ ಮತ್ತು ಡಾ.ಸ್ವಪ್ನಿಲ್ ಚಾಪೇಕರ್ ರಾಷ್ಟ್ರಗೀತೆ ಮತ್ತು ನಾಡಗೀತೆಯನ್ನು ಹಾಡಿದರು. ಡಾ.ನೀತಿನ್ ಕಾರ್ಯಕ್ರಮ ನಿರೂಪಿಸಿದರು.







