ಕಲಬುರಗಿ | ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನಕ್ಕೆ ಚಾಲನೆ

ಕಲಬುರಗಿ : ಶಹಾಬಾದ್ ಸಮುದಾಯ ಆರೋಗ್ಯ ಕೇಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮ, ಶಿಶು ಅಭಿವೃದ್ಧಿ ಯೋಜನೆ ಹಾಗೂ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಹದಿಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆ ಅಂಗವಾಗಿ “ಸ್ವಸ್ಥ ನಾರಿ – ಸಶಕ್ತ ಪರಿವಾರ” ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಹಾಬಾದ್ ಮುಖ್ಯ ದಂತ ಆರೋಗ್ಯಾಧಿಕಾರಿ ಡಾ.ಸಂಧ್ಯಾ ಕಾನೇಕರ್, ಋತುಚಕ್ರದ ನೈರ್ಮಲ್ಯ ಮತ್ತು ಆತ್ಮಗೌರವದ ಮೂಲಕ ಕಿಶೋರಿಯರು ಸಬಲೀಕರಣಗೊಳ್ಳಬೇಕು ಎಂದು ಕರೆ ನೀಡಿದರು.
10 ರಿಂದ 18 ವರ್ಷ ವಯಸ್ಸಿನ ಕಿಶೋರಿಯರಿಗೆ ಸರ್ಕಾರ ಉಚಿತ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ನೀಡುತ್ತಿದೆ. ಅದನ್ನು ಸರಿಯಾದ ರೀತಿಯಲ್ಲಿ ಬಳಸಬೇಕು. ಸ್ವಚ್ಛತೆ ಪಾಲಿಸದಿದ್ದರೆ ಸೋಂಕು ಹರಡುವ ಸಾಧ್ಯತೆ ಇದೆ. ಸಮತೋಲನ ಆಹಾರ ಸೇವನೆ, ತರಕಾರಿ, ಹಣ್ಣು, ಕಾಳುಗಳ ಸೇವನೆ ರೂಢಿಸಿಕೊಳ್ಳಬೇಕು. ಇಂದಿನ ಮಹಿಳೆಯರಲ್ಲಿ ರಕ್ತಹೀನತೆ ದೊಡ್ಡ ಸಮಸ್ಯೆಯಾಗಿದೆ. ಗರ್ಭಿಣಿಯರು ಪ್ರಸವಪೂರ್ವ ತಪಾಸಣೆ ಮಾಡಿಸಿಕೊಳ್ಳಬೇಕು. ಸ್ತನ ಕ್ಯಾನ್ಸರ್, ಗರ್ಭಕೋಶ ಕಂಠ ಕ್ಯಾನ್ಸರ್ ಮುಂತಾದ ಮಾರಕ ರೋಗಗಳಿಂದ ತಪ್ಪಿಸಿಕೊಳ್ಳಲು ಜಾಗೃತಿ ಅಗತ್ಯ ಎಂದು ಅವರು ಹೇಳಿದರು.
ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಂಕರ್ ರಾಥೋಡ್ ಶಿಶು ಪೋಷಣೆ, ಬಾಲ್ಯದ ಆರೈಕೆ ಹಾಗೂ ಆಹಾರ ಪದ್ಧತಿಗಳ ಕುರಿತು ಮಾಹಿತಿ ನೀಡಿದರು.
ಪ್ರಾಸ್ತಾವಿಕ ಭಾಷಣ ಮಾಡಿದ ಆರ್‌ಕೆಎಸ್‌ಕೆ ಅಮರೇಶ್ ಇಟ್ಟಗಿಕರ್ ಅವರು, ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನವನ್ನು ಪ್ರಧಾನಿ ನರೇಂದ್ರ ಮೋದಿ ಸೆ.17ರಂದು ಪ್ರಾರಂಭಿಸಿದ್ದು, ಅಕ್ಟೋಬರ್ 2025ರವರೆಗೆ ದೇಶಾದ್ಯಂತ ಜಾರಿಯಲ್ಲಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪಿಯು ಕಾಲೇಜು ಪ್ರಾಂಶುಪಾಲ ಪರಮೇಶ್ವರ್, ಡಾ. ಶ್ವೇತ ರಾಣಿ, ಸಂಗಮ ಪಾಟೀಲ್, ಎಸ್ಟಿಎಸ್ ಶ್ರೀಕಾಂತ್, ಶಾಂತಲಿಂಗ ಯೂಸಫ್ ನಾಕೇದಾರ, ಮಮತಾ ಮೈತ್ರಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ಭಾಗವಹಿಸಿದ್ದರು. ಆರ್‌ಕೆಎಸ್‌ಕೆ ಆಪ್ತ ಸುಮಲೋಚಕ ಮಲ್ಲಿಕಾರ್ಜುನ್ ಸಿಂಗೆ ಸ್ವಾಗತಿಸಿ, ನಿರೂಪಣೆ ಹಾಗೂ ವಂದನೆ ಸಲ್ಲಿಸಿದರು.







