ಕಲಬುರಗಿ: ಕೇಂದ್ರ ಕಾರಾಗೃಹದಲ್ಲಿ ಮಹಿಳಾ ಕೈದಿಗಳಿಗೆ ಕಾನೂನಿನ ಅರಿವು, ನೆರವು ಕಾರ್ಯಕ್ರಮ

ಕಲಬುರಗಿ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಕೇಂದ್ರ ಕಾರಾಗೃಹ ಸಹಯೋಗದೊಂದಿಗೆ ಸರ್ದಾರ್ ವಲ್ಲಭ್ ಭಾಯ್ ಪಟೇಲರ 150 ನೇ ಜನ್ಮ ದಿನದ ಪ್ರಯುಕ್ತ ಮಹಿಳಾ ಕೈದಿಗಳಿಗೆ ಕಾನೂನಿನ ಅರಿವು ಮತ್ತು ನೆರವು ಕಾರ್ಯಕ್ರಮ ನಡೆಯಿತು.
ಸಂಸ್ಥೆಯ ಅಧೀಕ್ಷಕರಾದ ಎಂ. ಹೆಚ್. ಆಶೇಖಾನ್ ಮಾತನಾಡುತ್ತಾ, ಮಹಿಳೆಯರು ಕಾನೂನಿನಡಿ ಸಿಗುವ ಸೌಲಭ್ಯಗಳ ಮಾಹಿತಿ ಪಡೆದಿರಬೇಕು. ಅಲ್ಲದೇ ಪೊಲೀಸರು ಸಂಜೆ 6 ಗಂಟೆಯ ನಂತರ ಬಂಧಿಸುವಂತಿಲ್ಲ. ತಾವು ಉಚಿತವಾಗಿ ನಿಮ್ಮ ಕಾನೂನಿನ ತೊಡಕನ್ನು ಪ್ರಾಧಿಕಾರದ ವತಿಯಿಂದ ಪಡೆಯಬಹುದು ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀನಿವಾಸ ನವಲೆ ಮಾತನಾಡಿ, ನಿಯಮಿತವಾಗಿ ಕಾರಾಗೃಹಕ್ಕೆ ಭೇಟಿ ನೀಡಿ ಕಾನೂನಿನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಆದರೆ, ವಿಶೇಷವಾಗಿ ಮಹಿಳೆಯರಿಗೆ ಯಾವುದೇ ಕಾರ್ಯಕ್ರಮಗಳನ್ನು ಇಲ್ಲಿಯವರೆಗೆ ಕೈಗೊಂಡಿರುವುದಿಲ್ಲ. ಆದ ಕಾರಣ ಇಂದು ನಿಮಗೋಸ್ಕರ ಕಾನೂನಿನ ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಆಯೋಜಿಸಲಾಯಿತು ಎಂದರು.
ಕಾರ್ಯಕ್ರಮದ ಉದ್ದೇಶವೆಂದರೆ, ಪೊಲೀಸ್ & ಜೈಲ್ ಇಲಾಖೆಯವರು ಕೆಲವೊಂದು ಸಂದರ್ಭದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿರುತ್ತಾರೆ. ಅವುಗಳನ್ನು ನಾವು ಗಮನಿಸಿ ಅವರಿಗೆ ಸೂಕ್ತವಾದ ಸಲಹೆ ಮತ್ತು ಸೂಚನೆಗಳನ್ನು ನೀಡಿ ಆಗಿರುವ ತಪ್ಪುಗಳನ್ನು ಸರಿಪಡಿಸಲು ತಿಳಿಸುತ್ತೇವೆ. ಅಲ್ಲದೇ ಕೆಲವರಿಗೆ ಜಾಮೀನುದಾರರು ಇರುವುದಿಲ್ಲ. ಆಗ ನಾವು ಸುಮಾರು 25 ರಿಂದ 40 ಸಾವಿರ ರೂಪಾಯಿಗಳನ್ನು ಜಿಲ್ಲಾಡಳಿತದ ವತಿಯಿಂದ ಪಡೆಯುವ ಅವಕಾಶವಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾರಾಗೃಹದ ಅಧೀಕ್ಷಕಿ ಡಾ. ಅನಿತಾ ಆರ್. ಅವರು ರಾಷ್ಟ್ರೀಯ ಐಕ್ಯತಾ ದಿನದ ಪ್ರಯುಕ್ತ ಐಕ್ಯತಾ ಪ್ರಮಾಣ ವಚನ ಭೋಧಿಸಿ, ಮಾತನಾಡಿದರು.
ನಿರ್ಭಯವಾಗಿ ತಮ್ಮ ಸಮಸ್ಯೆ, ಕಾನೂನಿನ ಸಮಸ್ಯೆ, ಲೈಂಗಿಕ ಶೋಷಣೆ ಮತ್ತು ಇತರ ಕೇಸಿಗೆ ಸಂಬಂಧಿಸಿದ ವಿಷಯವನ್ನು ನಮ್ಮ ಗಮನಕ್ಕೆ ತಂದರೆ ಅದನ್ನು ಪರಿಹರಿಸಲು ಪ್ರಮಾಣಿಕವಾಗಿ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ಸಂಸ್ಥೆಯ ಸಹಾಯಕ ಅಧೀಕ್ಷಕರುಗಳಾದ ಬಿ. ಸುರೇಶ, ಚನ್ನಪ್ಪ ಯಟಗಲ್, ಜೈಲರ್‌ಗಳಾದ ಸುನಂದಾ ವಿ., ಶ್ರೀಮಂತಗೌಡ ಪಾಟೀಲ್, ವಕೀಲರಾದ ತಾರಾ ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದರು.
ನಾಗರಾಜ ಮುಲಗೆ ನಿರೂಪಿಸಿ, ವಂದಿಸಿದರು.







