ಕಲಬುರಗಿ | ಹೃದಯಾಘಾತದಿಂದ ವ್ಯಕ್ತಿ ಮೃತ್ಯು; ವೈದ್ಯರ ನಿರ್ಲಕ್ಷ್ಯ ಆರೋಪ
ಆಸ್ಪತ್ರೆಯಲ್ಲಿ ಅಗತ್ಯ ಔಷಧವಿಲ್ಲ ಎಂದು ಆರೋಪಿಸಿ ಸ್ಥಳೀಯರಿಂದ ಪ್ರತಿಭಟನೆ

ಕಲಬುರಗಿ: ಅಫಜಲಪುರ ಪಟ್ಟಣ ತಾಲ್ಲೂಕು ಸರಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ವ್ಯಕ್ತಿಯೊರ್ವರು ಹೃದಯಾಘಾತದಿಂದ ಮೃತಪಟ್ಟಿರುವ ಆರೋಪ ಕೇಳಿಬಂದಿದ್ದು, ಸ್ಥಳೀಯರು ತಾಲ್ಲೂಕು ಆಸ್ಪತ್ರೆಯ ಎದುರು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.
ಮೃತರನ್ನು ಅಫಜಲಪುರ ಪಟ್ಟಣದ ವಾರ್ಡ್ ನಂ.3ರ ನಿವಾಸಿ ಮಿರ್ಜಾ ಅಕ್ಬರ್ ಬೇಗ್ (57) ಎಂದು ಗುರುತಿಸಲಾಗಿದೆ.
ಮಿರ್ಜಾ ಅಕ್ಬರ್ ಬೇಗ್ ಅವರಿಗೆ ರವಿವಾರ ಬೆಳಗ್ಗೆ ಹೃದಯಾಘಾತವಾಗಿತ್ತು, ಕೂಡಲೇ ಪಟ್ಟಣದಲ್ಲಿರುವ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಸರಿಯಾದ ಸಮಯಕ್ಕೆ ವೈದ್ಯರ ಮತ್ತು ಸಿಬ್ಬಂದಿಯವರ ತಪಾಸಣೆ ಮಾಡದೆ ಇರೋದರಿಂದ ಸೂಕ್ತ ಚಿಕಿತ್ಸೆ ಸಿಗಲಿಲ್ಲ. ಇಸಿಜಿ, ತುರ್ತು ಔಷಧಿ ಮಾತ್ರೆಗಳು ಇರದೇ ಇರುವುದರಿಂದ ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಗೆ ಮತ್ತೊಮ್ಮೆ ಹೃದಯಾಘಾತವಾಗಿದೆ. ಆಗ ಅಲ್ಲಿಂದ ನೇರವಾಗಿ ಕಲಬುರಗಿ ನಗರದ ಜಯದೇವ ಹೃದ್ರೋಗ ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್ ಇದ್ದರೂ ಸಹ ಸಹಾಯಕ್ಕೆ ಬರಲಿಲ್ಲ.ಕೊನೆಗೂ ಆಂಬ್ಯುಲೆನ್ಸ್ ಹತ್ತಿಸಿದ್ದು, ಆಕ್ಸಿಜನ್, ವೆಂಟಿಲೇಟರ್ ಇರದಿದ್ದರಿಂದ ರೋಗಿಯ ಉಸಿರಾಟಕ್ಕೆ ತೀವ್ರ ತೊಂದರೆಯಾಗಿದೆ. ಈ ವೇಳೆ ಜಯದೇವ ಆಸ್ಪತ್ರೆಗೆ ದಾಖಲಿಸುದಕ್ಕೂ ಮುನ್ನವೇ ಮಿರ್ಜಾ ಅಕ್ಬರ್ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಔಷಧಿ ಸಂಗ್ರಹ, ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ:
ಹೃದಯಾಘಾತಕ್ಕೆ ಒಳಗಾದ ಅಫಜಲಪುರ ಪಟ್ಟಣದ ನಿವಾಸಿ ಮಿರ್ಜಾ ಅಕ್ಬರ್ ಬೇಗ್ ಅವರನ್ನು ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡದ ವೈದರು, ಸಿಬ್ಬಂದಿಯ ನಿರ್ಲಕ್ಷ್ಯತನದಿಂದಾಗಿ ಅವರು ಮೃತಪಟ್ಟಿದ್ದಾರೆ. ಕೂಡಲೇ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸ್ಥಳೀಯರು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ. ಆಸ್ಪತ್ರೆಯಲ್ಲಿ ವಿವಿಧ ಉಪಯುಕ್ತ ಔಷಧಿ ಸೇರಿದಂತೆ ಉತ್ತಮ ವೆಂಟಿಲೇಟರ್ ಅಳವಡಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮಹೀಬೂಬ್ ಮನಿಯಾರ್, ಸಲೀಂ ಶೇಖ್, ಸದ್ದಾಮ್ ಬೇಗ್, ಆಸೀಫ್ ಇನಾಮದಾರ, ಜಮ್ಮು ಶೇಖ್, ಸೇರಿದಂತೆ ನೂರಾರು ಜನ ಸ್ಥಳೀಯರು ಇದ್ದರು.
ಅಫಜಲಪುರ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗಾಗಿ ಔಷಧಿಗಳೇ ಇಲ್ಲ. ಹೃದಯಾಘಾತಕ್ಕೆ ಒಳಗಾಗಿದ್ದ ನನ್ನ ಸಹೋದರನ್ನು ಇ.ಸಿ.ಜಿ ಮಾಡಲು ಬಂದಾಗ ಉಪಯುಕ್ತ ಉಪಕರಣ ಇಲ್ಲದಿರುವುದರಿಂದ ಸಮಸ್ಯೆ ಎದುರಿಸುವಂತಾಗಿದೆ.
-ಮಹೀಬೂಬ್ ಮನಿಯಾರ್ (ಸ್ಥಳೀಯ)







