ಕಲಬುರಗಿ | ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿಗೆ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ

ಕಲಬುರಗಿ : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿಗಳೂ ಆಗಿರುವ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗುರುವಾರ ಮೈಸೂರಿನಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಪೂಜ್ಯ ಡಾ.ದಾಕ್ಷಾಯಿಣಿ ಅವ್ವಾಜಿ ಅವರಿಗೆ ಸಾಹಿತ್ಯದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.
ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಶರಣಪ್ಪ ಹಲ್ಸೆ, ವಿಶ್ವವಿದ್ಯಾಲಯದ ಸಿಂಡಿಕೇಟ್ ಮತ್ತು ಸೆನೆಟ್ ಸದಸ್ಯರು ಸೇರಿದಂತೆ ಇತರ ಗಣ್ಯರ ಸಮ್ಮುಖದಲ್ಲಿ ಈ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಗೌರವ ಡಾಕ್ಟರೇಟ್ ಪ್ರದಾನ ಮಾಡುವಾಗ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಡಾ.ಅವ್ವಾಜಿ ಅವರನ್ನು ಸಮರ್ಥ ಆಡಳಿತಗಾರರು, ಶಿಕ್ಷಣತಜ್ಞೆ, ದಾಸೋಹ ಸಂಸ್ಕೃತಿಯ ಪರಿಕಲ್ಪನೆಗೆ ಬದ್ಧರಾದ, ಉನ್ನತ ಶ್ರೇಣಿಯ ದಾರ್ಶನಿಕರು ಎಂದು ಶ್ಲಾಘಿಸಲಾಯಿತು.
ಡಾ.ಅವ್ವಾಜಿಯವರ ಪರಿಚಯದಲ್ಲಿ, ಕೆಎಸ್‍ಒಯು ಮಹಿಳಾ ಸಬಲೀಕರಣ ಮತ್ತು ಹಿಂದುಳಿದ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುವಲ್ಲಿ ಹಾಗೂ ದಾಸೋಹ ಸಂಸ್ಕೃತಿಯನ್ನು ನವೀಕೃತ ಚೈತನ್ಯದಿಂದ ಮುಂದುವರಿಸುವಲ್ಲಿ ಡಾ. ಅವ್ವಾಜಿಯವರ ಅಪಾರ ಕೊಡುಗೆಯನ್ನು ಸ್ಮರಿಸಿತು. ಡಾ.ಅವ್ವಾಜಿ ಅವರನ್ನು ಅತ್ಯುತ್ತಮ ಶಿಕ್ಷಣತಜ್ಞೆ, ಕವಿಗಳು, ಬರಹಗಾರರು ಮತ್ತು ಸಮಾಜ ಸೇವಕರು ಎಂದು ಶ್ಲಾಘಿಸಿದ ಕೆಎಸ್‍ಒಯು ಅವರು, ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರೂ ಆಗಿರುವ ಡಾ.ಅವ್ವಾಜಿ ಅವರು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಂಡ್ ಮಷಿನ್ ಲರ್ನಿಂಗ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಂಡ್ ಡೇಟಾ ಸೈನ್ಸ್ ಕೋರ್ಸ್‍ಗಳಂತಹ ಹೊಸ ಮತ್ತು ಭವಿಷ್ಯದ ಕೋರ್ಸ್‍ಗಳನ್ನು ಪರಿಚಯಿಸುವಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ಹೊಸ ಉದ್ಯೋಗಾವಕಾಶಗಳನ್ನು ಒದಗಿಸಲು ಇನ್‍ಕ್ಯುಬೇಶನ್ ಕೇಂದ್ರಗಳನ್ನು ತೆರೆಯುವಲ್ಲಿ ತೀವ್ರ ಆಸಕ್ತಿ ವಹಿಸಿದ್ದಾರೆ ಎಂದು ಹೇಳಿದರು.
ಗೌರವ ಡಾಕ್ಟರೇಟ್ ಪಡೆದಿದ್ದಕ್ಕಾಗಿ ಡಾ.ಅವ್ವಾಜಿ ಅವರನ್ನು ಅಭಿನಂದಿಸಿದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಶಿಕ್ಷಣ ಮತ್ತು ಸಾಮಾಜಿಕ ಸೇವೆಯ ಕ್ಷೇತ್ರದಲ್ಲಿ ಡಾ.ಅವ್ವಾಜಿಯವರ ಅಪಾರ ಕೊಡುಗೆಯನ್ನು ವಿಶ್ವವಿದ್ಯಾಲಯವು ಸಾಹಿತ್ಯದ ಗೌರವ ಡಾಕ್ಟರೇಟ್ ನೀಡುವ ಮೂಲಕ ಗುರುತಿಸಿದೆ. ಡಾ.ಅವ್ವಾಜಿ ಅವರು ಸಮಾಜದ ಸುಧಾರಣೆಗಾಗಿ ತಮ್ಮ ವಿಶೇಷ ಕ್ಷೇತ್ರದಲ್ಲಿ, ತಮ್ಮ ಉತ್ತಮ ಕಾರ್ಯವನ್ನು ಮುಂದುವರಿಸಬೇಕು ಮತ್ತು ವಿಕಸಿತ ಭಾರತದ ಗುರಿಯನ್ನು ಸಾಧಿಸಲು ಶ್ರಮಿಸಬೇಕು ಎಂದು ಅವರು ಹೇಳಿದರು.
ಬೀದರ್ ಜಿಲ್ಲೆಯ ವಡಗಾಂವ್ ಗ್ರಾಮದ ದೇಶಮುಖ ಕುಟುಂಬದಲ್ಲಿ 1970 ರಲ್ಲಿ ಜನಿಸಿದ ಡಾ.ಅವ್ವಾಜಿ, ಶರಣಬಸವೇಶ್ವರ ಸಂಸ್ಥಾನದ 7ನೇ ಪೀಠಾಧಿಪತಿ ಲಿಂಗೈಕ್ಯ ಪೂಜ್ಯ ದೊಡ್ಡಪ್ಪ ಅಪ್ಪಾಜಿ ಅವರ ಮೊಮ್ಮಗಳಾಗಿದ್ದು, ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಮತ್ತು ಸಂಸ್ಥಾನದ 8ನೇ ಪೀಠಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಅವರನ್ನು ವಿವಾಹವಾಗಿದ್ದಾರೆ.
ಡಾ.ಅವ್ವಾಜಿ ಅವರಿಗೆ ಕೆಎಸ್‍ಒಯು ನೀಡುವ ಗೌರವ ಡಾಕ್ಟರೇಟ್ ಪದವಿ ಅಪರೂಪದ ಗೌರವವಾಗಿದೆ ಮತ್ತು ಐದು ವರ್ಷಗಳ ಅಲ್ಪಾವಧಿಯಲ್ಲಿಯೇ ಡಾ.ಅವ್ವಾಜಿ ಅವರಿಗೆ ವಿವಿಧ ಕ್ಷೇತ್ರಗಳಲ್ಲಿ ಅವರು ನೀಡಿದ ಅಪಾರ ಕೊಡುಗೆಯನ್ನು ಗುರುತಿಸಿ ಮೂರು ಸಾರ್ವಜನಿಕ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಪದವಿಗಳನ್ನು ನೀಡಿವೆ. 2000ನೇ ಇಸವಿಯಲ್ಲಿ ಡಾ.ಅವ್ವಾಜಿ ಅವರಿಗೆ ಗೌರವ ಡಾಕ್ಟರೇಟ್ ನೀಡಿದ ಮೊದಲ ವಿಶ್ವವಿದ್ಯಾಲಯ ದಾವಣಗೆರೆ ವಿಶ್ವವಿದ್ಯಾಲಯ, ನಂತರ 2024ರಲ್ಲಿ ಅಕ್ಕಮಹಾದೇವಿ ಕರ್ನಾಟಕ ಮಹಿಳಾ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು ತದನಂತರ ಈಗ ಕೆಎಸ್‍ಒಯು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಸಂಸ್ಥಾನದ ಭಕ್ತರಿಂದ "ಅನ್ನಪೂರ್ಣೇಶ್ವರಿ" ಎಂದು ಜನಪ್ರಿಯವಾಗಿರುವ ಡಾ.ಅವ್ವಾಜಿ ಅವರು ಹಸಿದ ಹೊಟ್ಟೆಗಳಿಗೆ ಆಹಾರವನ್ನು ನೀಡುವ ಮೂಲಕ ಮತ್ತು ಬಡವರು ಹಾಗೂ ಹಿಂದುಳಿದವರಿಗೆ ಕೈಗೆಟುಕುವ ಬೆಲೆಯಲ್ಲಿ ಸಂಘವು ನಡೆಸುವ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಸಹಾಯ ಮಾಡುವ ಮೂಲಕ ದಾಸೋಹ ಸಂಸ್ಕೃತಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದ್ದಾರೆ.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ್, ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಅನಿಲ್‍ಕುಮಾರ್ ಬಿಡವೆ, ಡೀನ್ ಡಾ.ಲಕ್ಷ್ಮಿ ಪಾಟೀಲ್ ಮಾಕಾ ಮತ್ತು ಹಣಕಾಸು ಅಧಿಕಾರಿ ಪ್ರೊ.ಕಿರಣ್ ಮಾಕಾ ಮೈಸೂರಿನಲ್ಲಿ ಡಾ.ಅವ್ವಾಜಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನದ ಸಮಯದಲ್ಲಿ ಉಪಸ್ಥಿತರಿದ್ದರು.







