ಕಲಬುರಗಿ | ಮಾತೃ ಸುರಕ್ಷಾ ಆ್ಯಪ್ ಬಿಡುಗಡೆ

ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಅನಿತಾ ಗೌರಾ ಕೋಣಿನ್ ಅವರು ವಿನ್ಯಾಸಗೊಳಿಸಿದ ಮಾತೃ ಸುರಕ್ಷಾ ಆ್ಯಪ್ ಬಿಡುಗಡೆ ಕಾರ್ಯಕ್ರಮ ಜರುಗಿತು
ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಆ್ಯಪ್ ಅನ್ನು ಬಿಡುಗಡೆಗೊಳಿಸಿದ್ದರು. ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶರಣಬಸಪ್ಪ ಕಾತ್ಯನಾಳ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಾತೃ ಸುರಕ್ಷಾ ಆ್ಯಪ್ ವಿನ್ಯಾಸಗೊಳಿಸಿದ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ಅನಿತಾ ಗೌರಾ ಕೋಣಿನ್ ಈ ಆ್ಯಪ್ ನ ವಿಶೇಷತೆ ಹಾಗೂ ಇದರಿಂದ ಆಗುವ ಅನೂಕೂಲತೆಗಳ ಬಗ್ಗೆ ವಿವರಿಸಿದರು.
ಆಶಾ ಕಾರ್ಯಕರ್ತರು ಗರ್ಭಿಣಿ ತಾಯಂದಿರ ಆರೋಗ್ಯ ರಕ್ಷಣೆ ಮಾಡುವ ಆಧಾರ ಸ್ತಂಭಗಳು ಈ ಆ್ಯಪ್ ಆಶಾ ಕಾರ್ಯಕರ್ತೆಯರಿಗೂ ಸಹಾಯ ಒದಗಿಸುತ್ತದೆ ಜೊತೆಗೆ ಇಂದು ಕೃತಕ ಬುದ್ಧಿಮತ್ತೆ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನದೇಯಾದ ಕೊಡುಗೆ ನೀಡುತ್ತಿದೆ ಎಂದು ತಿಳಿಸಿದರು.
ಸರಳವಾದ ಆ್ಯಪ್ ಇದಾಗಿದ್ದು, ಇದು ಈ ಜನರಿಗೆ ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿ ಡೇಟಾವನ್ನು ನಮೂದಿಸಲು ಸಹಾಯ ಮಾಡುತ್ತದೆ, ಈ ರೀತಿಯಾಗಿ ಹೆಚ್ಚಿನ ಅಪಾಯದ ಗರ್ಭಧಾರಣೆಯನ್ನು ವೇಗವಾಗಿ ವರದಿ ಮಾಡಲಾಗುತ್ತದೆ, ಉತ್ತಮವಾಗಿ ಟ್ರ್ಯಾಕ್ ಮಾಡಲಾಗುತ್ತದೆ ಮತ್ತು ಅಧಿಕಾರಿಗಳು ಹೆಚ್ಚಿನ ಅಪಾಯದ ತಾಯಂದಿರ ಸಂಖ್ಯೆಯನ್ನು ಸಹ ತಿಳಿದುಕೊಳ್ಳಬಹುದು. ಆ್ಯಪ್ ಈ ತಾಯಂದಿರನ್ನು ಟ್ರ್ಯಾಕ್ ಮಾಡಲು ಮತ್ತು ಅವರಿಗೆ ಸಕಾಲಿಕ ಆರೈಕೆ ಸಿಗುವಂತೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರು ಹಾಗೂ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ಸಂಚಾಲಕರಾದ ಡಾ.ಶರಣಬಸಪ್ಪ ಹರವಾಳ, ಬಸವೇಶ್ವರ ಆಸ್ಪತ್ರೆಯ ಸಂಚಾಲಕರಾದ ಡಾ.ಕಿರಣ್ ದೇಶಮುಖ್, ನಿರ್ದೇಶಕರಾದ ಡಾ.ಮಲ್ಲಿಕಾರ್ಜುನ ಭಂಡಾರ, ಡೀನ್ ಶರಣಗೌಡ ಪಾಟೀಲ್, ಬಸವೇಶ್ವರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ ಆನಂದ ಗಾರಂಪಳ್ಳಿ ಉಪಸ್ಥಿತರಿದ್ದರು.







