ಕಲಬುರಗಿ | ಸಭಾಪತಿ, ಸಚಿವರೊಂದಿಗೆ ಎಂಎಲ್ಸಿ ನಮೋಶಿ ಸಭೆ; ಬೇಡಿಕೆಗಳಿಗೆ ಸ್ಪಂದನೆ

ಕಲಬುರಗಿ/ ಬೆಂಗಳೂರು : ಬೆಂಗಳೂರಿನಲ್ಲಿ ಮಂಗಳವಾರ ನಡೆದ ಅಧಿವೇಶನದ ಬಿಡುವಿನ ವೇಳೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ.ನಮೋಶಿಯ ಅವರು, ಮೇಲ್ಮನೆ ಸಭಾಪತಿಗಳಾದ ಬಸವರಾಜ್ ಹೊರಟ್ಟಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಅವರೊಂದಿಗೆ ವಿಶೇಷ ಸಭೆ ನಡೆಸಿದರು.
ಈ ಸಭೆಯಲ್ಲಿ 2006ರ ಏ.1ಕ್ಕಿಂತ ಮುಂಚೆ ಸೇವೆಗೆ ಸೇರಿ ನಂತರ ಅನುದಾನಕ್ಕೆ ಒಳಪಟ್ಟ ಅನುದಾನಿತ ಶಾಲಾ ಮತ್ತು ಕಾಲೇಜುಗಳ ಸಿಬ್ಬಂದಿಗಳಿಗೆ ಹಳೆಯ ಪಿಂಚಣಿ ಯೋಜನೆ (ಡಿಫೈನ್ಡ್ ಪಿಂಚನ್ ಸ್ಕೀಮ್) ನೀಡುವ ಕುರಿತು ಚರ್ಚಿಸಲಾಯಿತು. ಅಲ್ಲದೆ, ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯನ್ನು ಪರಿಹರಿಸಲು, ಕಾರ್ಯಬಾರದ ಉಪನ್ಯಾಸಕರನ್ನು ಬೇರೆ ಅನುದಾನಿತ ಕಾಲೇಜುಗಳಲ್ಲಿ ಅಥವಾ ಸಮೀಪದ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ನಿಯೋಜನೆ ಮಾಡುವ ಬಗ್ಗೆಯೂ ಅಭಿಪ್ರಾಯ ಹಂಚಿಕೊಳ್ಳಲಾಯಿತು. ಈ ವೇಳೆ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಸಕಾರಾತ್ಮಕವಾಗಿ ಸ್ಪಂದಿಸಿದರು.
ವಿಧಾನ ಪರಿಷತ್ತಿನ ಶಾಸಕ ಶಶೀಲ್ ನಮೋಶಿ ಅವರು, 2022ನೇ ಸಾಲಿನ 15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಆಯ್ಕೆಯಾದ 13,352ರಲ್ಲಿ ವಿವಿಧ ಕಾರಣಗಳಿಂದ ಖಾಲಿಯಾಗಿರುವ ಹುದ್ದೆಗಳಿಗೆ, ಕಡಿಮೆ ಅಂತರದಲ್ಲಿ ಹುದ್ದೆಯಿಂದ ವಂಚಿತರಾದ ಅಭ್ಯರ್ಥಿಗಳ ಹಿಂದಿನ ಕ್ರಮ ಸಂಖ್ಯೆಯನ್ನು ಪರಿಗಣಿಸಿ ಹೆಚ್ಚುವರಿ ಆಯ್ಕೆಪಟ್ಟಿಯನ್ನು ಬಿಡುಗಡೆಗೊಳಿಸಿ ನೇಮಕಾತಿ ಮಾಡಿಕೊಳ್ಳುವಂತೆ ಒತ್ತಾಯಿಸಿದರು.
ನಮೋಶಿ ಅವರ ವಿವಿಧ ಬೇಡಿಕೆಗಳ ಕುರಿತಾಗಿ ಸ್ಪಂದಿಸಿದ ಶಿಕ್ಷಣ ಸಚಿವರು, ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಈ ಎಲ್ಲಾ ವಿಷಯಗಳಿಗೆ ಶೀಘ್ರವಾಗಿ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ ಎಂದು ಶಶೀಲ್ ನಮೋಶಿ ತಿಳಿಸಿದ್ದಾರೆ.







