ಕಲಬುರಗಿ | ನಾಗರಿಕರ ರಕ್ಷಣೆಗಾಗಿ ʼಅಪರೇಷನ್ ಅಭ್ಯಾಸ್ʼ ಅಣಕು ಪ್ರದರ್ಶನ : ಡಿ.ಸಿ. ಬಿ.ಫೌಝಿಯಾ ತರನ್ನುಮ್ ಸೂಚನೆ

ಕಲಬುರಗಿ : "ಅಪರೇಷನ್ ಅಭ್ಯಾಸ್" ನಾಗರಿಕ ರಕ್ಷಣಾ ಕಾರ್ಯಚರಣೆಯ ಅಣಕು ಪ್ರದರ್ಶನ ಶೀಘ್ರದಲ್ಲಿಯೇ ಕಲಬುರಗಿ ನಗರ ಹಾಗೂ ಜಿಲ್ಲೆಯ ವಿವಿಧ ಕಡೆ ಆಯೋಜಿಸಬೇಕಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಡಿ.ಸಿ.ಬಿ.ಫೌಝಿಯಾ ತರನ್ನುಮ್ ಅವರು ಸೂಚನೆ ನೀಡಿದರು.
ಬುಧವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಈ ಸಂಬಂಧ ಪೂರ್ವಭಾವಿ ಸಭೆ ನಡೆಸಿದ ಅವರು, ಸಂಬಂಧಪಟ್ಟ ಎಲ್ಲಾ ಇಲಾಖೆಯ ಅಧಿಕಾರಿಗಳು ಈ ಅಣಕು ಪ್ರದರ್ಶನದಲ್ಲಿ ಸಕ್ರಿಯವಾಗಿ ಭಾಗವಹಿಸಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ರಕ್ಷಣಾ ಕಾರ್ಯಚರಣೆ ಯಾವ ರೀತಿಯಾಗಿ ನಡೆಯುತ್ತದೆ ಎಂಬುದರ ಕುರಿತು ಅಣಕು ಪ್ರದರ್ಶನದ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ ಎಂದರು.
ಶಾಲಾ-ಕಾಲೇಜು, ವಾಣಿಜ್ಯ ಅಂಗಡಿ-ಮುಂಗಟ್ಟುಗಳು ಹಾಗೂ ಕೈಗಾರಿಕೆ ಪ್ರದೇಶದಲ್ಲಿ ನಾಗರಿಕ ರಕ್ಷಣಾ ಕಾರ್ಯಚರಣೆ ಕುರಿತು ಹೆಚ್ಚಿನ ರೀತಿಯಲ್ಲಿ ಜನಜಾಗೃತಿ ಮೂಡಿಸಬೇಕು. ಈ ಕುರಿತು ಎಸ್.ಓ.ಪಿ ಜಾರಿಗೊಳಿಸಬೇಕು ಎಂದು ಪೊಲೀಸ್ ಸೇರಿದಂತೆ ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಲಾಯಿತು.
ಇನ್ನು ಕಲಬುರಗಿ ನಗರದಲ್ಲಿ 10 ನಿಮಿಷಗಳ ಕಾಲ ಬ್ಲ್ಯಾಕ್ ಔಟ್ ಮಾಡಲು ನಿರ್ಧರಿಸಿದ್ದು, ಕೂಡಲೆ ಜೆಸ್ಕಾಂ ಮತ್ತು ಕೆ.ಪಿ.ಟಿ.ಸಿ.ಎಲ್ ಅಧಿಕಾರಿಗಳು ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಂಡು ದಿನಾಂಕ ನಿಗದಿಪಡಿಸಿ ಮೊದಲೆ ಸಾರ್ವಜನಿಕರಿಗೆ ತಿಳಿಸಬೇಕು ಎಂದರು.
ಸಭೆಯಲ್ಲಿ ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಡಿ.ಸಿ.ಪಿ. ಕನಿಕಾ ಸಿಕ್ರಿವಾಲ್, ಡಿ.ಸಿ.ಎಫ್ ಸುಮಿತ್ ಪಾಟೀಲ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತ ಪ್ರಭುರೆಡ್ಡಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.







