ಕಲಬುರಗಿ: ಮುಂಗಾರು ಬೀಜ ದಿನೋತ್ಸವ-2025

ಕಲಬುರಗಿ: ವಲಯ ಕೃಷಿ ಸಂಶೋಧನಾ ಕೇಂದ್ರ, ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ ಮತ್ತು ಕೃಷಿ ಮಹಾವಿದ್ಯಾಲಯ, ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮುಂಗಾರು ಬೀಜ ದಿನೋತ್ಸವದಲ್ಲಿ ವಿವಿಧ ಗ್ರಾಮಗಳಿಂದ ಸುಮಾರು 85 ಜನ ರೈತರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ರೈತರಿಗೆ ಮುಂಗಾರು ಹಂಗಾಮಿನ ಸಿದ್ಧತೆ, ತಳಿಗಳ ಮತ್ತು ತಾಂತ್ರಿಕತೆಗಳ ಬಗ್ಗೆ ವಿವಿರವಾಗಿ ಮಾಹಿತಿ ನೀಡಲಾಯಿತು. ಇದಲ್ಲದೇ ತೊಗರಿ ಬೀಜೋತ್ಪಾದನೆ, ಸುಧಾರಿತ ಬೇಸಾಯ ಕ್ರಮಗಳ ಹಾಗೂ ಬೀಜೋಪಚಾರದ ಮಾಹಿತಿಯನ್ನು ವಿವಿರವಾಗಿ ತಿಳಿಸಿಕೊಡಲಾಯಿತು.
ಇತ್ತೀಚಿನ ದಿನಗಳಲ್ಲಿ ತೊಗರಿ ಬೆಳೆಗೆ ತಗಲುತ್ತಿರುವ ನೆಟೆ ರೋಗಗಳ ನಿಯಂತ್ರಣ ಮತ್ತು ಕೀಟಗಳ ನಿರ್ವಹಣೆ ಕುರಿತು ಸಂಬಂಧಿಸಿದ ವಿಜ್ಞಾನಿಗಳಿಂದ ಮಾಹಿತಿ ನೀಡಲಾಯಿತು.
ನೂತನ ತಳಿಗಳ ಬಳಕೆ, ತಾಂತ್ರಿಕ ಸಮಸ್ಯೆಗಳ ಬಗ್ಗೆ, ಪಲ್ಸ್ ಮ್ಯಾಜಿಕ್ ಮತ್ತು ಜೈವಿಕ ಗೊಬ್ಬರಗಳ ಬಳಸುವ ವಿಧಾನವನ್ನು ತಿಳಿಸಿಕೊಡಲಾಯಿತು.
ಬೀಜ ದಿನೊತ್ಸವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಲಬುರಗಿ ಕೃಷಿ ಮಹಾವಿದ್ಯಾಲಯ ಡೀನ್ ಡಾ.ಶಿವಶರಣಪ್ಪ ಗೌಡಪ್ಪ ಮತ್ತು ಅತಿಥಿಗಳಾಗಿ ಕಲಬುರಗಿ ಕೃಷಿ ಮಹಾವಿದ್ಯಾಲಯ ಪ್ರಾದ್ಯಾಪಕರು ಹಾಗೂ ಕೀಟ ಶಾಸ್ತ್ರದ ಮುಖ್ಯಸ್ಥರು ಡಾ. ರಾಚಪ್ಪ ಹಾವೇರಿ, ವಲಯ ಕೃಷಿ ಸಂಶೋಧನಾ ಕೇಂದ್ರದ ಅಧ್ಯಕ್ಷರಾದ ಡಾ. ಬಿ. ಎಂ. ದೊಡ್ಡಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ರೈತರಿಗೆ ಹೊಸ ತೊಗರಿ ತಳಿಗಳ ಕುರಿತು ತಳಿ ಶಾಸ್ತ್ರಜ್ಞರಾದ ಡಾ.ಪ್ರವೀಣ ಮಾಹಿತಿ ನೀಡಿದರು. ಬೆಳೆಗಳಲ್ಲಿ ಕೀಟ ನಿರ್ವಹಣೆ ಕುರಿತು ಡಾ. ರಾಚಪ್ಪ ವಿಸ್ತ್ರತ ಮಾಹಿತಿ ನೀಡಿದರು. ಬೆಳೆಯ ಬೇಸಾಯ ಪದ್ದತಿಗಳು ಹಾಗೂ ಗೊಬ್ಬರಗಳ ಬಳಕೆ ಮತ್ತು ಬಿತ್ತನೆಯ ಕುರಿತು ಡಾ: ಯೂಸುಫ ಅಲಿ ನಿಂಬರಗಿ ಅವರು ರೈತರಿಗೆ ಮಾತನಾಡಿದರು.
ಬೀಜೋಪಚಾರದಲ್ಲಿ ಜೈವಿಕ ಗೊಬ್ಬರಗಳ ಬಳಕೆ ಕುರಿತು ಡಾ. ಪ್ರೀಯಾಂಕ ಮಾಹಿತಿ ನೀಡಿದರು. ತೊಗರಿ ಹಾಗೂ ಮುಂಗಾರು ಬೆಳೆಗಳಲ್ಲಿ ಕಂಡು ಬರುವ ವಿವಿಧ ಬೆಳೆಗಳಲ್ಲಿಯ ರೋಗಗಳ ನಿರ್ವಹಣೆ ಕುರಿತು ಡಾ. ಮಲ್ಲಿಕಾರ್ಜುನ ಕೆಂಗನಾಳ ಮಾತನಾಡಿ, ರೈತರು ತೊಗರಿ ಬೆಳೆಯನ್ನು ನೆಟೆ ರೋಗದಿಂದ ಸಂರಕ್ಷಿಸಲು ಸಾದ್ಯವಾದಷ್ಟು ಮಣ್ಣಿಗೆ ತ್ಕಕಂತೆ ಸೂಕ್ತ ತಳಿಗಳನ್ನು ಆಯ್ಕೆ ಮಾಡುವದರ ಜೊತೆಗೆ ಬೆಳೆಯನ್ನು ಬೋದುಗಳ ಮೇಲೆ ಬಿತ್ತನೆ ಮಾಡಲು ಕರೆಕೊಟ್ಟರು.
ಕಾರ್ಯಕ್ರಮದಲ್ಲಿ ತಳಿ ವಿಜ್ಞಾನಿ ಡಾ.ಲಕ್ಷ್ಮಣ್ ಮಾತನಾಡಿ ಬೀಜಗಳ ಪ್ರಾಮುಖ್ಯತೆಯ ಕುರಿತು ಮಾಹಿತಿ ನೀಡಿದರು.







