ಕಲಬುರಗಿ | ಕೊಲೆ ಪ್ರಕರಣ : ಮೂವರು ಆರೋಪಿಗಳ ಬಂಧನ

ಬಂಧಿತ ಆರೋಪಿಗಳು
ಕಲಬುರಗಿ : ಯುವಕನೋರ್ವನನ್ನು ಆತನ ಗೆಳೆಯರೇ ಬೈಕ್ನಲ್ಲಿ ಕರೆತಂದು ರಾಜಾಪೂರ ಬಡಾವಣೆಯ ಅಂಗಡಿಯೊಂದರ ಮುಂದೆ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ವಿಶ್ವವಿದ್ಯಾಲಯ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ನಗರದ ಬಂಜಾರ ಕಾಲೋನಿಯ ನಿವಾಸಿ ಕೃಷ್ಣಾ ಅಲಿಯಾಸ್ ಗಜ್ಜು ಪವಾರ, ಆದರ್ಶ ನಗರದ ನಿವಾಸಿ ಆಕಾಶ ಹಾಗೂ ರಾಜಾಪೂರದ ಸರ್ವೋದಯ ಕಾಲೋನಿಯ ನಿವಾಸಿ ಪ್ರಶಾಂತ ಪೂಜಾರಿ ಬಂಧಿತ ಆರೋಪಿಗಳಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಮಾ.15ರಂದು ನಾಲ್ವರು ಮದ್ಯರಾತ್ರಿವರೆಗೂ ಪಾರ್ಟಿ ಮಾಡಿದ್ದು, ರೇವಣಸಿದ್ದಪ್ಪ ಪದೇ ಪದೇ ಸಿಗರೇಟ್ ಕೊಡಿಸು, ಮದ್ಯಪಾನ ಕೊಡಿಸು, ಬೀಡಿ ಕೊಡಿಸು ಎಂದು ಪೀಡಿಸುತ್ತಿದ್ದರಿಂದ ಆರೋಪಿಗಳಾದ ಕೃಷ್ಣಾ, ಆಕಾಶ, ಪ್ರಶಾಂತ ಮೂವರು ಸೇರಿ ತಡರಾತ್ರಿ ರಾಜಾಪೂರ ಬಳಿಯಲ್ಲಿ ಬರುತ್ತಿದ್ದಂತೆ ರೇವಣಸಿದ್ದಪ್ಪನ್ನು ಬೈಕ್ನಿಂದ ಕೆಳಗಿಳಿಸಿದ ಮೂವರು ಜಗಳವಾಡಿದ್ದು, ರೇವಣಸಿದ್ದಪ್ಪನ ತಲೆಯ ಮೇಲೆ ಕಲ್ಲಿನಿಂದ ಜಜ್ಜಿದ ಮೂವರು ಆತನನ್ನು ಕೊಲೆ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ವಿಶ್ವವಿದ್ಯಾಲಯ ಠಾಣೆಯ ಪೊಲೀಸರು ತನಿಖೆ ನಡೆಸಿ, ಸಿಸಿಟಿವಿ ಹಾಗೂ ಇತರೆ ಮಾಹಿತಿಯನ್ನು ಆಧರಿಸಿ ಆರೋಪಿಗಳ ಕುರಿತು ಖಚಿತ ಮಾಹಿತಿ ಕಲೆ ಹಾಕಿದ ಕಮೀಷನರ್ ಡಾ.ಶರಣಪ್ಪ ಎಸ್.ಡಿ., ಡಿಸಿಪಿರವರಾದ ಕನೀಕಾ ಸಿಕ್ರಿವಾಲ್, ಪ್ರವೀಣ ನಾಯಕ, ಅವರ ಮಾರ್ಗದರ್ಶನದಲ್ಲಿ ಎಸಿಪಿ ಡಿ.ಜಿ ರಾಜಣ್ಣ ಅವರ ನೇತೃತ್ವ ದಲ್ಲಿ ಸ್ಥಳಕ್ಕೆ ಧಾವಿಸಿ ಆರೋಪಿಗಳಾದ ಕೃಷ್ಣಾ, ಆಕಾಶ ಹಾಗೂ ಪ್ರಶಾಂತ ಮೂವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.





