ಕಲಬುರಗಿ | ಸಮೀಕ್ಷೆಗೆ ನೆಟ್‌ವರ್ಕ್ ಸಮಸ್ಯೆ : ಕಾಂಪೌಂಡ್ ಹತ್ತಿದ ಶಿಕ್ಷಕ !

ಕಲಬುರಗಿ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿರುವ ಶಿಕ್ಷಕರಿಗೆ ನಾಲ್ಕನೆಯ ದಿನವಾದ ಶುಕ್ರವಾರದಂದೂ ಸರ್ವರ್ ಸಂಕಷ್ಟ ಎದುರಾಗಿದೆ. ಸರ್ವರ್ ಮತ್ತು ನೆಟ್ ವರ್ಕ್ ಪಡೆಯಲಿಕ್ಕಾಗಿ ಸರ್ವೇ ನಡೆಸುವ ಶಿಕ್ಷಕರೊಬ್ಬರು ಕೆಇಬಿ ಘಟಕದ ಕಾಂಪೌಂಡ್ ಹತ್ತಿ ಸರ್ವರ್ ಪಡೆಯಲು ಹರಸಾಹಸ ಪಟ್ಟಿದ್ದಾರೆ.
ಕಲಬುರಗಿ ನಗರದ ಜಾಫರಾಬಾದ್ ಪ್ರದೇಶದ ಕೆಇಬಿ ಘಟಕದ ಸಮೀಪ ಸಮೀಕ್ಷೆಗಾಗಿ ಮನೆಗಳಿಗೆ ಹೋದಾಗ ಹಲವು ಶಿಕ್ಷಕರು ಸರ್ವರ್ ಸಮಸ್ಯೆಯಿಂದ ಬೇಸತ್ತಿದ್ದಾರೆ, ಈ ಪ್ರದೇಶದಲ್ಲಿ ನಿಗದಿತ ಸಮಯಕ್ಕೆ ನೆಟ್ ವರ್ಕ್ ಇಲ್ಲದೆ ಇರುವುದರಿಂದ ಶಿಕ್ಷಕರೊಬ್ಬರು ಕಾಂಪೌಂಡ್ ಏರಿಕೊಂಡು ಪರದಾಡಿರುವ ಪ್ರಸಂಗ ನಡೆದಿದೆ.
ಕಲಬುರಗಿ ದಕ್ಷಿಣ ವಲಯದಲ್ಲಿ ಬರುವ ಬಬಲಾದ (ಎಸ್) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಹಾನಿಂಗಪ್ಪ ಮೂಲೆಗೆ ಎಂಬಾತರು ಸಮೀಕ್ಷೆಯ ಸರ್ವರ್ ಹಾಗೂ ನೆಟ್ ಸರಿಯಾಗಿ ಬರದೇ ಕಾರಣದಿಂದ ಕಾಂಪೌಂಡ್ ಕಟ್ಟಡ ಹತ್ತಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಸಮೀಕ್ಷೆ ಮಾಡುತ್ತಿದ್ದೇವೆ, ಸರ್ವರ್ ಹಾಗೂ ಅಂತರ್ಜಾಲವು ಯಾವುದೇ ತರಹದ ಸಹಕಾರ ಮಾಡುತ್ತಿಲ್ಲ. ಧಾರಾಕಾರ ಮಳೆಯಲ್ಲೂ ನಾವು ಸರ್ವೇ ಮಾಡಲು ಬಂದಿದ್ದೇವೆ. ಸರ್ವರ್ ಸಮಸ್ಯೆಯಿಂದ ಮೂರು ದಿನಗಳಿಂದ ಯಾವ ಮನೆಗಳಲ್ಲೂ ಸಂಪೂರ್ಣ ಸಮೀಕ್ಷೆ ಮಾಡಲಾಗಿಲ್ಲ. ಶುಕ್ರವಾರ ಬೆಳಗ್ಗೆಯಿಂದ ಎಷ್ಟೇ ಪ್ರಯತ್ನ ಪಟ್ಟರೂ 2 ಮನೆಗಳ ಸಮೀಕ್ಷೆ ಮುಗಿದಿದೆ. ಆದರೆ ನಮಗೆ ಒಟ್ಟಾರೆ 121 ಮನೆಗಳ ಟಾರ್ಗೆಟ್ ಕೊಟ್ಟಿದ್ದಾರೆ. ಅವು ಯಾವಾಗ ಮುಗಿಯುತ್ತವೆ ನಮಗೆ ಗೊತ್ತಿಲ್ಲ ಎಂದು ಶಿಕ್ಷಕ ಮಹಾನಿಂಗಪ್ಪ ಮೂಲೆಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ನನಗೆ ಸಕ್ಕರೆ ಕಾಯಿಲೆ ಇದೆ, ಹಾಗಾಗಿ ಸಮೀಕ್ಷೆ ಮಾಡಲು ಕಷ್ಟವಾಗುತ್ತಿದೆ. ಈ ಬಗ್ಗೆ ನನಗೆ ಸಮೀಕ್ಷೆ ಕಾರ್ಯಕ್ಕೆ ಹಾಕಬೇಡಿ ಎಂದರೂ ಅಧಿಕಾರಿಗಳು ಸಮೀಕ್ಷೆಯ ಕರ್ತವ್ಯಕ್ಕೆ ನಿಯೋಜಿಸಿದ್ದಾರೆ, ನಗರಲ್ಲಿ ಸುತ್ತಾಡುತ್ತ ಸಮೀಕ್ಷೆ ಮಾಡುವುದರಿಂದ ನನಗೆ ಆರೋಗ್ಯ ಸಮಸ್ಯೆ ಎದುರಾಗುತ್ತಿದೆ ಎಂದು ಶಿಕ್ಷಕ ಮಹಾನಿಂಗಪ್ಪ ಅಳಲು ತೋಡಿಕೊಂಡಿದ್ದಾರೆ.







