ಕಲಬುರಗಿ | ಕೇಂದ್ರೀಯ ವಿವಿ ಆವರಣದಲ್ಲಿ ಯಾವುದೇ ಗೋರಿಗಳು ನಿರ್ಮಾಣವಾಗುತ್ತಿಲ್ಲ: ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ

ಕಲಬುರಗಿ: ಕೇಂದ್ರೀಯ ವಿವಿ ಆವರಣದಲ್ಲಿ ಬಿಗಿ ಸುರಕ್ಷಾ ಕ್ರಮಕೈಗೊಳ್ಳಲಾಗಿದೆ. ಆವರಣದಲ್ಲಿ ರಾತ್ರೋ ರಾತ್ರಿ ಗೋರಿಗಳು ನಿರ್ಮಾಣ ಮಾಡಲಾಗುತ್ತಿದೆ ಎಂಬುದು ಸುಳ್ಳು ಎಂದು ಕಲಬುರಗಿ ಕೇಂದ್ರೀಯ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ತಿಳಿಸಿದ್ದಾರೆ.
ರಾಜ್ಯದ ವಿದ್ಯುನ್ಮಾನದ ಕೆಲ ಸುದ್ದಿವಾಹಿನಿಗಳು ಸಿಯುಕೆಯಲ್ಲಿ ರಾತ್ರೋ ರಾತ್ರಿ ಗೋರಿಗಳು ನಿರ್ಮಾಣ ಮಾಡಲಾಗುತ್ತಿದೆ ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಿರುವ ಕುರಿತು ಸ್ಪಷ್ಟಿಕರಣ ನೀಡಿ 'ವಾರ್ತಾ ಭಾರತಿ'ಯೊಂದಿಗೆ ಮಂಗಳವಾರ ಮಾತನಾಡಿದ ಅವರು, ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯ ಶಾಂತಿಯುತ ವಾತಾವರಣವನ್ನು ಹೊಂದಿದೆ. ಉತ್ತಮವಾದ ಭದ್ರತೆ, ರಾತ್ರಿ ಗಸ್ತು ನಡೆಸುವ ಮೂಲಕ ಅನ್ಯರು ಒಳಗೆ ಪ್ರವೇಶಿಸದಂತೆ ನೋಡಿಕೊಂಡಿದ್ದೇವೆ ಎಂದರು.
ಸಿಯುಕೆ ಆವರಣದಲ್ಲಿ ಎರಡು ಗೋರಿ, ಒಂದು ದೇವಸ್ಥಾನ ಇದೆ. ಇವುಗಳು ನಾನು ಬರುವ ಮುಂಚೆ ಇಲ್ಲಿವೆ. ವಿವಿ ಸ್ಥಾಪನೆ ಆಗುವ ಮುಂಚೆ ಇದ್ದವು. ಈ ಬಗ್ಗೆ ಮತ್ತೊಮ್ಮೆ ಪರಿಶೀಲಿಸುತ್ತೇವೆ. ಕ್ಯಾಂಪಸ್ ನಲ್ಲಿ ಹೊರಗಿನವರ ಪ್ರವೇಶಕ್ಕೆ ಅವಕಾಶ ಇಲ್ಲ. ಸದ್ಯ ಯಾವುದೇ ರೀತಿಯ ನಿರ್ಮಾಣ ಮಾಡುವ ಕೆಲಸ ಇಲ್ಲಿ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಕ್ಯಾಂಪಸ್ ಆವರಣದಲ್ಲಿ ಲಕ್ಷ್ಮೀ ಟೆಂಪಲ್ ಮತ್ತು ಎರಡು ಗೋರಿಗಳು(ಮಝಾರ್) ಇವೆ. ಲಕ್ಷ್ಮೀ ಟೆಂಪಲ್ ಸ್ವಲ್ಪ ಹೊರಗಡೆ ಇರುವುದರಿಂದ ವಿವಿಯ ಕಾಂಪೌಂಡ್ ವಾಲ್ ನಿರ್ಮಾಣದ ವೇಳೆ ಗೇಟ್ ನ್ನು ಕೂಡಿಸಿದ್ದೇವೆ. ಗೋರಿಗಳು ಕ್ಯಾಂಪಸ್ ನ ತುಂಬ ಒಳಗಡೆ ಇವೆ. ಇಲ್ಲಿ ಬಿಗಿ ಬಂದೋಬಸ್ತ್ ಇದೆ. ರಾತ್ರಿ ವೇಳೆ ಪೆಟ್ರೋಲಿಂಗ್ ನಡೆಸಲಾಗುತ್ತದೆ. ಉನ್ನತ ಮಟ್ಟದ ಭದ್ರತೆ ಬಿಗಿಗೊಳಿಸಿ ಸುರಕ್ಷತೆಯನ್ನು ಕಾಪಾಡಲಾಗುತ್ತಿದೆ ಎಂದು ತಿಳಿಸಿದರು.







