ಕಲಬುರಗಿ | ಶಿವನಗರ ಅಂಗನವಾಡಿ ಕೇಂದ್ರದಲ್ಲಿ ಪೋಷಣ ಮಾಸಾಚರಣೆ ಕಾರ್ಯಕ್ರಮ

ಕಲಬುರಗಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಲಬುರಗಿ ನಗರ ಯೋಜನೆ ವ್ಯಾಪ್ತಿಯ ಶಹಾಬಜಾರ-ಬಿ ಹಾಗೂ ಖಾನಾಪುರ-ಬಿ ವಲಯಗಳ ಸಂಯುಕ್ತಾಶ್ರಯದಲ್ಲಿ, ಶಹಾಬಜಾರ-ಬಿ ವಲಯದ ಶಿವನಗರ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ರಾಷ್ಟ್ರೀಯ ಪೋಷಣ ಮಾಸಾಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಕುಮಾರ ರಾಠೋಡ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, “ಅಪೌಷ್ಠಿಕತೆ ಹೋಗಲಾಡಿಸಲು ಉತ್ತಮ ಗುಣಮಟ್ಟದ ಆಹಾರ ಸೇವಿಸುವುದು ಅತ್ಯಗತ್ಯ. ಪೋಷಣ ಅಭಿಯಾನದ ಉದ್ದೇಶವೇ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದು” ಎಂದು ಹೇಳಿದರು.
ಮಹಿಳಾ ಶಿವಶರಣಪ್ಪ ಪೂಜಾರಿ ಅವರು ಹಸಿರು ತರಕಾರಿ, ಮೊಟ್ಟೆ, ಕಾಳುಬೇಳೆ ಹಾಗೂ ಪೌಷ್ಠಿಕಯುತ ಆಹಾರದ ಸೇವನೆಯ ಮಹತ್ವವನ್ನು ತಿಳಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಶರಣಪ್ಪ ಬುಶೆಟ್ಟಿ ಅವರು ಮಕ್ಕಳ ಸ್ವಚ್ಛತೆ ಹಾಗೂ ಸಮತೋಲನ ಆಹಾರದ ಅವಶ್ಯಕತೆ ಬಗ್ಗೆ ಪ್ರಭಾವಶೀಲವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಿಮಂತ, ಅನ್ನಪ್ರಾಶನ, ಅಕ್ಷರಾಭ್ಯಾಸ, ತಾಯಿ ಹೆಸರಿನಲ್ಲಿ ಸಸಿ ನೆಡುವುದು, ಮಕ್ಕಳ ವೇಷಭೂಷಣ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆದವು.
ಹಿರಿಯ ಮೇಲ್ವಿಚಾರಕಿ ಅಶ್ವಿನಿ ಬದ್ರಶೆಟ್ಟಿ ಸ್ವಾಗತಿಸಿದರು. ವಲಯ ಮೇಲ್ವಿಚಾರಕಿ ವಿಲಾಸಮತಿ ಎಸ್. ಹಿರೇಮಠ ನಿರೂಪಿಸಿದರು. ಕೊನೆಯಲ್ಲಿ ಹಿರಿಯ ಮೇಲ್ವಿಚಾರಕಿ ಗೀತಾ ಚವ್ಹಾಣ ವಂದಿಸಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯ ಸಚಿನ್ ಕಡಗಂಚಿ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಕಲಬುರಗಿ ನಗರ ಯೋಜನೆಯ ಮೇಲ್ವಿಚಾರಕರು ಹಾಗೂ ಶಹಾಬಜಾರ-ಬಿ ಮತ್ತು ಖಾನಾಪುರ-ಬಿ ವಲಯದ ಕಾರ್ಯಕರ್ತೆಯರು ಉಪಸ್ಥಿತರಿದ್ದರು.







