ಕಲಬುರಗಿ | ಮಾ.27 ರಂದು ಪ್ರಥಮ ರಂಗ ಸಾಹಿತ್ಯ ಸಮ್ಮೇಳನ : ತೇಗಲತಿಪ್ಪಿ

ಕಲಬುರಗಿ : ನಮ್ಮ ನೆಲದ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿರುವ ರಂಗಭೂಮಿಯ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಿ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಮಾ.27 ರಂದು ನಗರದ ಕನ್ನಡ ಭವನದಲ್ಲಿ ಒಂದು ದಿನದ ಕಲಬುರಗಿ ಜಿಲ್ಲಾ ಪ್ರಥಮ ರಂಗ ಸಾಹಿತ್ಯ ಸಮ್ಮೇಳನವನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ಶನಿವಾರ ನಡೆಸಿದ ಪೂರ್ವಸಿದ್ಧತಾ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದು, ವಿಭಿನ್ನ ಕಾರ್ಯಕ್ರಮಗಳ ಮೂಲಕ ಜಿಲ್ಲೆಯ ಜನರ ಹೃದಯವನ್ನು ಗೆದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸದಾ ಕಾಲ ಇಂಥ ಹತ್ತು ಹಲವು ವಿಭಿನ್ನ ಪ್ರಯೋಗವನ್ನು ಮಾಡುತ್ತಾ ಬಂದಿದೆ. ಕನ್ನಡ ಸಾರಸ್ವತ ಲೋಕದಲ್ಲಿಯೇ ಇದೊಂದು ಹೊಸ ಪ್ರಯೋಗದಂತಿದೆ ಎಂದು ಅವರು ಅಭಿಪ್ರಾಯಿಸಿದರು.
ಪ್ರಸ್ತುತ ದಿನಗಳಲ್ಲಿ ಸಿನಿಮಾ, ಕಿರುತೆರೆಗಳ ಅತೀಯಾದ ಹಾವಳಿಯಿಂದ ನಶಿಸಿ ಹೋಗುತ್ತಿರುವ ರಂಗಭೂಮಿ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಿ ಬೆಳೆಸಬೇಕಾಗಿದೆ. ಸಮ್ಮೇಳನದ ಯಶಸ್ವಿಗೆ ಪೂರಕವಾಗಿ ಸ್ವಾಗತ ಸಮಿತಿ ರಚನೆ, ವೈಶಿಷ್ಠ್ಯಪೂರ್ಣವಾದ ಗೋಷ್ಠಿಗಳು, ಸಮ್ಮೇಳನಾಧ್ಯಕ್ಷರ ಆಯ್ಕೆ ಶೀಘ್ರದಲ್ಲೇ ನಡೆಸಲಾಗುವುದೆಂದು ಅವರು ಹೇಳಿದರು.
ಒಂದು ದಿನದ ಈ ಸಮ್ಮೇಳನ ಹಲವು ವಿಶೇಷತೆಗಳಿಂದ ಕೂಡಿರಲಿದೆ ಎಂದು ವಿವರಣೆ ನೀಡಿದರು.
ಸಭೆಯಲ್ಲಿ ಹಿರಿಯ ಸಾಹಿತಿಗಳಾದ ಎ.ಕೆ.ರಾಮೇಶ್ವರ, ನರಸಿಂಗರಾವ ಹೇಮನೂರ, ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಶರಣರಾಜ ಛಪ್ಪರಬಂದಿ, ಪ್ರಮುಖರಾದ ಡಾ. ವಿಶ್ವರಾಜ ಪಾಟೀಲ, ರಾಜೇಂದ್ರ ಮಾಡಬೂಳ, ಎಂ.ಎನ್. ಸುಗಂಧಿ, ಪ್ರಭುಲಿಂಗ ಕಿಣಗಿ, ರವಿ ಹಾಗರಗಿ, ದಿನೇಶ ಮದಕರಿ, ಮಲ್ಲಿಕಾರ್ಜುನ ಸಾರವಾಡ, ಪ್ರಭುಲಿಂಗ ಮೂಲಗೆ, ಸಿ.ಎಸ್. ಮಾಲಿಪಾಟೀಲ, ಮಲ್ಲಿನಾಥ ಸಂಗಶೆಟ್ಟಿ, ನವಾಬ್ ಖಾನ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.







