ಕಲಬುರಗಿ| ಕಾಳಗಿ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಶೂನ್ಯ: ಪ್ರಶಾಂತ್ ಕದಂ

ಕಲಬುರಗಿ: ಕಾಳಗಿ ಪಟ್ಟಣದ ಅಭಿವೃದ್ಧಿಗೆ ಶಾಸಕ ಡಾ. ಅವಿನಾಶ್ ಜಾಧವ್ ಅವರ ಕೊಡುಗೆ ಶೂನ್ಯ ಎಂದ ಕಾಂಗ್ರೆಸ್ ಕಾರ್ಯಕರ್ತರಿಗೆ ದಾಖಲೆ ಸಮೇತ ಬಹಿರಂಗ ಚರ್ಚೆಗೆ ಬನ್ನಿ ಎಂದು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರಶಾಂತ್ ಕದಂ ಆಹ್ವಾನಿಸಿದರು.
ಕಾಳಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಡಾ. ಅವಿನಾಶ್ ಜಾಧವ್ ಅವರು ಮಾಡಿರುವ ಅಭಿವೃದ್ಧಿ ಕಾಮಗಾರಿಗಳ ದಾಖಲೆ ಬಿಡುಗಡೆ ಮಾಡಿ ಮಾತನಾಡಿದ ಪ್ರಶಾಂತ್ ಕದಂ, ಕಾಳಗಿ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ನಾಯಕರ ಪಾಲು ಇದ್ದರೆ ಒಂದಾದರೂ ದಾಖಲೆ ತೋರಿಸಲಿ, ಅದು ಬಿಟ್ಟು ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.
ಕಲ್ಯಾಣ ಕರ್ನಾಟಕದ 16 ನೂತನ ತಾಲೂಕುಗಳಂತೆ ಕಾಳಗಿ ತಾಲೂಕಿಗೂ ಪ್ರಜಾಸೌಧ ಅನುಮೋದನೆಗೊಂಡಿದೆ. ಇದರಲ್ಲಿ ಕಾಳಗಿಗೆ ವಿಶೇಷವಾಗಿದ್ದು ಏನಿದೆ, ಇದರಲ್ಲಿ ವಿಧಾನ ಪರಿಷತ್ ಸದಸ್ಯರ ಜಗದೇವ ಗುತ್ತೇದಾರ ಅವರ ಕೊಡುಗೆ ಏನಿದೆ ಎಂದು ಪ್ರಶ್ನಿಸಿದರು.
ಶಾಸಕ ಡಾ. ಅವಿನಾಶ್ ಜಾಧವ್ ಅವರು ತಮ್ಮ ಅವಧಿಯಲ್ಲಿ ಕಾಳಗಿಯಲ್ಲಿ ಹೈಟೆಕ್ ಬಸ್ ನಿಲ್ದಾಣ, ಶಾಲಾ ಕಾಲೇಜು ಕಟ್ಟಡ ನಿರ್ಮಾಣ, ಅಮೃತ್ ಯೋಜನೆ, ಬ್ರಿಡ್ಜ್ ಕಂ ಬ್ಯಾರೆಜ್, ಸ್ಲಮ್ ಬೋರ್ಡ್ ಮನೆ ನಿರ್ಮಾಣ, ಬಹುಗ್ರಾಮ ಕುಡಿಯುವ ನೀರು ಯೋಜನೆ, ನೀಲಕಂಠ ಕಾಳೇಶ್ವರ ದೇವಸ್ಥಾನದಲ್ಲಿ ಬೃಹತ್ ಊಟದ ಹಾಲ್ ನಿರ್ಮಾಣ, ಡಿವೈಡರ್ ರಸ್ತೆ ನಿರ್ಮಾಣ, ಮುಖ್ಯಬಜಾರ ರಸ್ತೆ ಅಗಲಿಕರಣ, ಪಟ್ಟಣ ಪಂಚಾಯತ್ ವಿಶೇಷ ಅನುದಾನ ಸೇರಿದಂತೆ ನೂರಾರು ಕೋಟಿ ರೂ. ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಇವ್ಯಾವು ಕಾಂಗ್ರೆಸ್ ನಾಯಕರ ಕಣ್ಣಿಗೆ ಕಾಣುವುದಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ
ಕಾಂಗ್ರೆಸ್ ನಾಯಕರು ಅಭಿವೃದ್ಧಿ ವಿಷಯದಲ್ಲೂ ರಾಜಕೀಯ ಮಾಡುವ ಮೂಲಕ ಕಾಮಗಾರಿ ತಡೆಹಿಡೆಯುವುದೆ ಇವರ ಕೆಲಸವಾಗಿದೆ. ಕಾಂಗ್ರೆಸ್ ಹಿಂಬಾಲಕರು ಸುಳ್ಳು ಆರೋಪ ಮಾಡುವುದು ಬಿಟ್ಟು ಅಭಿವೃದ್ಧಿ ಕಾರ್ಯಗಳ ದಾಖಲೆ ಸಮೇತ ಬಹಿರಂಗ ಚರ್ಚೆಗೆ ಬರಲಿ ಎಂದು ಪಂಥಹ್ವಾನ ಹಾಕಿದರು.
ಈ ವೇಳೆ ಬಿಜೆಪಿ ಮುಖಂಡರಾದ ಶೇಖರ ಪಾಟೀಲ್, ಚಂದ್ರಕಾಂತ ಜಾಧವ್, ಪ.ಪಂ.ಸದಸ್ಯ ಜಿತೇಂದ್ರ ರಾಥೋಡ್, ಶರಣು ಸಾಲಿಮಠ, ಪುರುಷೋತ್ತಮ ಗುತ್ತೇದಾರ್, ಜಗದೀಶ ಪಾಟೀಲ್, ಭೀಮರಾವ ಮಲಘಾಣ, ಸುನೀಲ ರಾಜಪೂರ, ಜಗನಾಥ್ ತೇಲಿ, ಶರಣು ಚಂದಾ, ಮಂಜುನಾಥ ಹೆಬ್ಬಾಳ, ಸಂತೋಷ ಜಾಧವ್, ಹಣಮಂತ ಕಣ್ಣಿ, ಅಶೋಕ ಹುಗೊಂಡ್, ಗಣೇಶ್ ಸಿಂಗಶೆಟ್ಟಿ, ಕಾಳಶೆಟ್ಟಿ ಪಡಶೆಟ್ಟಿ, ಬಲರಾಮ ವಲ್ಲಾಪುರೆ, ಬಾಬು ಹಿರಾಪುರ್, ಶ್ರೀನಿವಾಸ್ ಗುರುಮಿಟ್ಕಲ, ರಾಜು ಒಡೆಯರಾಜ್ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.







