ಕಲಬುರಗಿ | ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಡಿ.ಪಿ.ಆರ್ ಸಿದ್ದಪಡಿಸಿ : ಬಿ.ಫೌಝಿಯಾ ತರನ್ನುಮ್

ಕಲಬುರಗಿ: ಕರ್ನಾಟಕ ಪ್ರವಾಸೋದ್ಯಮ ನೀತಿಯಡಿ ಜಿಲ್ಲೆಯಾದ್ಯಂತ ಗುರುತಿಸಿರುವ 30 ಪ್ರವಾಸಿ ತಾಣಗಳಲ್ಲಿ ಕನಿಷ್ಟ ಮೂಲಸೌಕರ್ಯ ಕಲ್ಪಿಸಲು ಡಿ.ಪಿ.ಆರ್ ಸಿದ್ದಪಡಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಶನಿವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರವಾಸೋದ್ಯಮ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪ್ರವಾಸೋದ್ಯಮ ಇಲಾಖೆಯು ಜಂಟಿಯಾಗಿ ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟು ಸ್ಥಳೀಯರ ಅಪೇಕ್ಷೆಯಂತೆ ಡಿ.ಪಿ.ಆರ್ ತಯಾರಿಸಬೇಕು. ತುರ್ತಾಗಿ ಪ್ರವಾಸಿ ತಾಣಗಳಲ್ಲಿ ಸೈನೇಜ್ ಬೋರ್ಡ್ ಅಳವಡಿಕೆ ಕಾರ್ಯ ಮಾಡಬೇಕು ಎಂದರು.
ಜಿಲ್ಲೆಯ ಪ್ರವಾಸಿ ತಾಣಗಳು ಕುರಿತು ಹೆದ್ದಾರಿ ಫಲಕಗಳ ಮೂಲಕ ವ್ಯಾಪಕ ಪ್ರಸಾರ ನೀಡಿ ಪ್ರವಾಸೋದ್ಯಮ ಉತ್ತೇಜಿಸಬೇಕು. ಪ್ರವಾಸಿ ತಾಣಗಳ ಮಾಹಿತಿವುಳ್ಳ ಬ್ರೋಚರ್ ಮುದ್ರಿಸಿ ಹಂಚಬೇಕು. ಇದಲ್ಲದೆ ಜಿಲ್ಲೆಯ ಪ್ರವಾಸಿ ತಾಣಗಳು, ಕಲೆ, ಸಂಸ್ಕೃತಿ, ವೇಷಭೂಷಣ, ಅಹಾರ ಪದ್ದತಿ ಕುರಿತು ಕಾಫಿ ಟೇಬಲ್ ಪುಸ್ತಕ ಹೊರತರಬೇಕು ಎಂದು ಡಿ.ಸಿ. ತಿಳಿಸಿದರು.
ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕಿ ಬೇಬಿ ಮೊಗೆರಾ, ರಾಜ್ಯ ಪ್ರಾಚ್ಯವಸ್ತು ಸಂಗ್ರಹಾಲಯಗಳ ಇಲಾಖೆಯ ಸಹಾಯಕ ನಿರ್ದೇಶಕ ರಾಜಾರಾಮ, ತಾಂತ್ರಿಕ ಇಂಜಿನೀಯರ್ ಪ್ರೇಮಲತಾ, ಕೆ.ಆರ್.ಐ.ಡಿ.ಎಲ್ ಇ.ಇ. ರಾಹುಲ, ಪಿ.ಆರ್.ಇ.ಡಿ ಇ.ಇ. ಮಲ್ಲಿಕಾರ್ಜುನ ಸೇರಿದಂತೆ ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿಗಳು ಇದ್ದರು.







