ಕಲಬುರಗಿ | ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಿ, ಅವರ ಭವಿಷ್ಯ ರೂಪಿಸುವಲ್ಲಿ ಶ್ರಮಿಸಿ : ಡಿಸಿ ಫೌಝಿಯಾ ತರುನ್ನಮ್

ಕಲಬುರಗಿ: ಸರ್ಕಾರಿ ಮತ್ತು ಖಾಸಗಿ ಶಾಲೆ, ವಸತಿ ನಿಲಯ, ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಕರ್ನಾಟಕ ಮಕ್ಕಳ ರಕ್ಷಣಾ ನೀತಿ-2016 ನ್ನು ಕಡ್ಡಾಯವಾಗಿ ಅನುಷ್ಟಾನಗೊಳಿಸುವ ಕುರಿತು ಸಂಬಂಧಿಸಿದ ಇಲಾಖೆಗಳು ತಕ್ಷಣ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷರಾಗಿರುವ ಬಿ.ಫೌಝಿಯಾ ತರುನ್ನಮ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಲಬುರಗಿ ಜಿಲ್ಲಾ ಮೇಲ್ವಿಚಾರಣಾ ಸಮಿತಿ ಸಭೆ ಮತ್ತು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಮಿಷನ್ ವಾತ್ಸಲ್ಯ ಯೋಜನೆಯಡಿ ಈ ಕುರಿತಂತೆ ಸಂಬಂಧಿಸಿದ ಅಧಿಕಾರಿ/ಸಿಬ್ಬಂದಿಗಳಿಗೆ ಕರ್ನಾಟಕ ಮಕ್ಕಳ ರಕ್ಷಣಾ ನೀತಿ-2016 ವಿಷಯದ ಕುರಿತು ತರಬೇತಿ ಸಹ ನೀಡಲಾಗಿರುತ್ತದೆ ಎಂದು ತಿಳಿಸಿದರು.
ಸರ್ಕಾರಿ ಮತ್ತು ಖಾಸಗಿ ಶಾಲೆ, ವಸತಿ ನಿಲಯ, ಮಕ್ಕಳ ವಾಲದ ರಾಜ್ಯ ಮಕ್ಕಳ ರಕ್ಷಣಾ ನೀತಿ-2016ನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕಾಗಿರುತ್ತದೆ. ಆ ಮೂಲಕ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಬಾಲ್ಯವಿವಾಹ, ಬಾಲಕಾರ್ಮಿಕದಂತಹ ಅನಿಷ್ಟ ಪದ್ದತಿಗಳಿಂದ ಮಕ್ಕಳನ್ನು ರಕ್ಷಿಸಿ ಮಕ್ಕಳಿಗೆ ಉತ್ತಮವಾದ ಭವಿಷ್ಯವನ್ನು ರೂಪಿಸಲು ಸಾಧ್ಯವಾಗುತ್ತದೆ.
ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆ, ವಸತಿ ನಿಲಯ, ಮಕ್ಕಳ ಪಾಲನಾ ಸಂಸ್ಥೆಗಳ ಕಟ್ಟಡಗಳ ಮುಂಭಾಗದಲ್ಲಿ ಎದ್ದು ಕಾಣುವ ಹಾಗೆ ಮಕ್ಕಳ ಸಹಾಯವಾಣಿ-1098 ಹಾಗೂ ಪೊಲೀಸ್ ಸಹಾಯವಾಣಿ-112ನ್ನು ಕಡ್ಡಾಯವಾಗಿ ಬರೆಸಬೇಕು.
ಮಕ್ಕಳ ಹಕ್ಕುಗಳ ರಕ್ಷಣೆ ಇಂದಿನ ತುರ್ತು ಅಗತ್ಯವಾಗಿದೆ. ಸಂಕಷ್ಟದಲ್ಲಿನ ಹಾಗೂ ಸವಾಲಿನಲ್ಲಿರುವ ಮಕ್ಕಳ ಹಿತರಕ್ಷಣೆಗೆ ಹೆಚ್ಚು ಒತ್ತು ನೀಡುತ್ತಿದೆ. ಇಂತಹ ಮಕ್ಕಳ ಗುರುತಿಸುವಿಕೆ, ಸಂಕಷ್ಟ ಸ್ಥಿತಿಯಲ್ಲಿ ಮಾಹಿತಿ ಹಂಚಿಕೊಳ್ಳಲು ಹಾಗೂ ಪುನರ್ ವಸತಿ ಸೇವೆ ಕಲ್ಪಿಸುವಲ್ಲಿ ಮಕ್ಕಳ ಸಹಾಯವಾಣಿ 1098 ಮಹತ್ವದ ಪಾತ್ರ ವಹಿಸುತ್ತದೆ.
ಎಲ್ಲಾ ಶಾಲೆ/ವಸತಿ ನಿಲಯಗಳಲ್ಲಿ/ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಸಲಹಾ ಪೆಟ್ಟಿಗೆಯನ್ನು ಕಡ್ಡಾಯವಾಗಿ ಅಳವಡಿಸಬೇಕು. ಸಲಹಾ ಪೆಟ್ಟಿಗೆಗಳು ಮುಖ್ಯೋಪಾಧ್ಯಯರು, ನಿಲಯ ಪಾಲಕರ ರೂಮಲ್ಲಿ ಅಥವಾ ಸಿ.ಸಿ ಕ್ಯಾಮರಾ ಕಣ್ಗಾವಲಿನಲ್ಲಿ ಇರದೇ ಮಕ್ಕಳು ತಮ್ಮ ಕುಂದು ಕೊರತೆಗಳನ್ನು ನಿರ್ಭಿತರಾಗಿ, ಮುಕ್ತವಾಗಿ ಹಾಕುವಂತಹ ಸ್ಥಳದಲ್ಲಿ ಅಳವಡಿಸಬೇಕು ಎಂದರು.
ಶಾಲೆ/ವಸತಿ ನಿಲಯಗಳಲ್ಲಿ/ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಹೊರಗುತ್ತಿಗೆ ಸಿಬ್ಬಂದಿಗಳ ಪೊಲೀಸ್ ಪರಿಶೀಲನಾ ವರದಿಯನ್ನು ಪಡೆಯಬೇಕು ಮತ್ತು ಅದು ಚಾಲ್ತಿಯಲ್ಲಿರುವಂತೆ ಕಾಲ ಕಾಲಕ್ಕೆ ನವೀಕರಿಸಬೇಕು.
ಶಾಲೆ/ವಸತಿ ನಿಲಯಗಳಲ್ಲಿ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಮಕ್ಕಳಿಗೆ, ಸಿಬ್ಬಂದಿಗಳಿಗೆ ಫೋಕ್ಸೊ ಕಾಯ್ದೆ-2012, ಬಾಲ್ಯವಿವಾಹ ನಿಷೇಧ ಕಾಯ್ದೆ-2016, ಮಕ್ಕಳ ಸಹಾಯವಾಣಿ-1098, ಪೊಲೀಸ್ ಸಹಾಯವಾಣಿ-112 ಕುರಿತು ಜಾಗೃತಿ ಮೂಡಿಸಬೇಕೆಂದರು.
ಶಾಲೆ/ವಸತಿ ನಿಲಯಗಳಲ್ಲಿ/ಮಕ್ಕಳ ಪಾಲನಾ ಸಂಸ್ಥೆಗಳ ಎಲ್ಲಾ ಸಿಬ್ಬಂದಿಗಳಿಂದ ಕರ್ನಾಟಕ ಮಕ್ಕಳ ರಕ್ಷಣಾ ನೀತಿ-2016ನ್ನು ಪಾಲಿಸುವ ಬಗ್ಗೆ ಘೋಷಣಾ ಪತ್ರ ಪಡೆಯಬೇಕು ಹಾಗೂ ಎಲ್ಲಾ ಶಾಲೆ/ವಸತಿ ನಿಲಯಗಳಲ್ಲಿ/ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಮಕ್ಕಳ ಸುರಕ್ಷತಾ ಸಮಿತಿಗಳನ್ನು ರಚಿಸಿ, ಕಾಲ ಕಾಲಕ್ಕೆ ಸಮಿತಿಗಳ ಸಭೆ ನಡೆಸುವುದು, ಮಕ್ಕಳೊಂದಿಗೆ ಸುರಕ್ಷತೆಯ ಕುರಿತು ಚರ್ಚಿಸಿ ನಡಾವಳಿ ದಾಖಲಿಸುವುದು ಕಡ್ಡಾಯವಾಗಿ ಮಾಡಬೇಕು, ತಪ್ಪಿದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿರುವ 6 ಸರ್ಕಾರಿ ಪಾಲನಾ ಸಂಸ್ಥೆಗಳಲ್ಲಿ 320 ಮಂಜೂರಾಗಿರುವ ಮಕ್ಕಳ ಸಂಖ್ಯೆ, ಅದರಲ್ಲಿ ಪ್ರಸ್ತುತ ಒಟ್ಟು 89 ಮಕ್ಕಳಿದ್ದಾರೆ, ಅನಾಥ ಮಕ್ಕಳು 39, ಏಕ ಪೋಷಕ 19, ಇಬ್ಬರು ಪೋಷಕರಿರುವ 26, ಪರಿತ್ಯಕ್ತ 3 ಮತ್ತು ಒಪ್ಪಿಸಲ್ಪಟ್ಟ ಇಬ್ಬರು ಮಕ್ಕಳು ಸೇರಿದ್ದಾರೆ. 8 ಖಾಸಗಿ ನೋಂದಾಯಿತ ಸಂಸ್ಥೆಗಳಲ್ಲಿ 325 ಮಂಜೂರಾಗಿರುವ ಮಕ್ಕಳ ಸಂಖ್ಯೆಯಾಗಿದ್ದು, ಇದರಲ್ಲಿ ಪ್ರಸ್ತುತ 105 ಮಕ್ಕಳಿದ್ದು, ಅದರಲ್ಲಿ ಅನಾಥ 34, ಏಕ ಪೋಷಕ 70, ಇಬ್ಬರೂ ಪೋಷಕರನ್ನು ಹೊಂದಿರುವ ಒಂದು ಮಗುವಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
2025 ನೇ ಸಾಲಿನ ಮೇ-ಆಗಷ್ಟ್ ಮಾಹೆಯವರೆಗೆ ಮಕ್ಕಳ ಕಲ್ಯಾಣ ಸಮಿತಿ ಜೆಜೆಬಿ- 1 ರಲ್ಲಿ 19 ಪ್ರಕರಣಗಳು ಹಾಗೂ ಜೆಜೆಬಿ-2 ರಲ್ಲಿ 38 ಪ್ರಕರಣಗಳು ದಾಖಲಾಗಿದ್ದು, ಪ್ರಕರಣ ವಿಲೇವಾರಿ ಹಾಗೂ ನೊಂದವರಿಗೆ ನ್ಯಾಯ ಕೊಡಿಸುವ ಕಾರ್ಯವನ್ನು ಸಂಬಂಧಿಸಿದವರು ತ್ವರಿತವಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಸಭೆಯಲ್ಲಿ ನ್ಯಾಯಮೂರ್ತಿ ಶ್ರೀನಿವಾಸ ನವಲೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.







