ಕಲಬುರಗಿ | ವಾಡಿ ಪುರಸಭೆ ಅಧಿಕಾರಿಗಳ ವಿರುದ್ಧ ಜನಧ್ವನಿ ಜಾಗೃತ ಸಮಿತಿಯಿಂದ ಪ್ರತಿಭಟನೆ

ಕಲಬುರಗಿ: ಹನುಮಾನ ನಗರ ಹಾಗೂ ಬಸವನಗರ ಸೇರಿದಂತೆ ವಿವಿಧ ಬಡಾವಣೆಗಳ ಜನರಿಗೆ ಸಿಸಿ ರಸ್ತೆ, ಸಿಸಿ ಚರಂಡಿ, ಕುಡಿಯುವ ಶುದ್ಧ ನೀರು ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿ ಜನಧ್ವನಿ ಜಾಗೃತ ಸಮಿತಿ ಕಾರ್ಯಕರ್ತರು ಶುಕ್ರವಾರ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಪುರಸಭೆ ಮುಂದೆ ಪ್ರತಿಭಟನೆ ನಡೆಸಿದರು.
ವಾರ್ಡ್ ಗಳ ಅಭಿವೃದ್ಧಿ ಕೈಬಿಟ್ಟ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಜನಧ್ವನಿ ಜಾಗೃತ ಸಮಿತಿ ಅಧ್ಯಕ್ಷ ವೀರಭದ್ರಪ್ಪ ಆರ್.ಕೆ., ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಪಾವತಿಸಿದ ತೆರಿಗೆ ಹಣದಿಂದ ಜನರಿಗಾಗಿ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಆದರೂ ವಾಡಿ ಜನರು ಕನಿಷ್ಠ ಮೂಲಭೂತ ಸೌಲಭ್ಯಗಳಿಂದ ವಂಚಿತಗೊಂಡಿದ್ದಾರೆ. ಕೆಲವು ಬಡಾವಣೆಗಳಲ್ಲಿ ಸಿಸಿ ರಸ್ತೆ ಮತ್ತು ಚರಂಡಿಗಳನ್ನು ನಿರ್ಮಿಸಲಾಗಿದ್ದು, ಎರಡು ವರ್ಷಗಳಿಂದ ಹೂಳೆತ್ತದ ಕಾರಣ ಗಬ್ಬು ನಾರುತ್ತಿವೆ. ಹನುಮಾನ ನಗರದಲ್ಲಿ ರಸ್ತೆಗಳಿವೆ, ಚರಂಡಿಗಳು ಮಾತ್ರ ನಾಪತ್ತೆಯಾಗಿವೆ. ನೈರ್ಮಲ್ಯ ವ್ಯವಸ್ಥೆ ಹದಗೆಟ್ಟು ಜನರು ಸಾಂಕ್ರಾಮಿಕ ರೋಗಗಳೊಂದಿಗೆ ಬದುಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಾಧಿಕಾರಿ ಗೈರು-ವಾಗ್ವಾದ:
ಪ್ರತಿಭಟನೆಯ ಮುನ್ಸೂಚನೆ ನೀಡಿದರೂ ಸಹ ಪುರಸಭೆ ಮುಖ್ಯಾಧಿಕಾರಿ ಸಿ.ಫಕೃದ್ಧೀನ್ ಸಾಬ್ ಕಚೇರಿಯಲ್ಲಿ ಇರದೆ ಗೈರಾಗಿದ್ದರಿಂದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಸಲ ಜನರು ಸಮಸ್ಯೆಗಳ ಕುರಿತು ಮನವಿಪತ್ರ ಕೊಡಲು ಬರುವಾಗ ಅಧಿಕಾರಿ ಉಪಸ್ಥಿತರಿರದೆ ತಪ್ಪಿಸಿಕೊಳ್ಳುವ ಚಾಳಿ ಮುಂದುವರೆಸಿದ್ದಾರೆ. ಜನರ ಸೇವೆಗೆಂದು ಕರ್ತವ್ಯಕ್ಕೆ ಬಂದಿರುವ ಅಧಿಕಾರಿ ಜನ ವಿರೋಧಿಯಾಗಿ ವರ್ತಿಸುತ್ತಿದ್ದಾರೆ. ಇಂಥಹ ಅಧಿಕಾರಿಗಳು ವಾಡಿ ಪುರಸಭೆಗೆ ಬೇಕಾಗಿಲ್ಲ. ಜನ ಹೋರಾಟವನ್ನು ಕಾಲು ಕಸದಂತೆ ಕಾಣುತ್ತಿರುವ ವಾಡಿ ಪುರಸಭೆ ಮುಖ್ಯಾಧಿಕಾರಿ ಸಿ.ಫಕೃದ್ದೀನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಮನವಿಪತ್ರ ಸ್ವೀಕರಿಸಲು ಬಂದಿದ್ದ ಪುರಸಭೆ ವ್ಯವಸ್ಥಾಪಕ ಮಲ್ಲಿಕಾರ್ಜುನ ಹಾರಕೂಡ ಹಾಗೂ ಪರಿಸರ ಅಭಿಯಂತರ ಪೂಜಾ ಫುಲಾರೆ ಅವರೊಂದಿಗೆ ಜನಧ್ವನಿ ಕಾರ್ಯಕರ್ತರು ವಾಗ್ವಾದ ನಡೆಸಿದರು.
ಜನಧ್ವನಿ ಜಾಗೃತ ಸಮಿತಿ ಕಾರ್ಯದರ್ಶಿ ಶೇಖ ಅಲ್ಲಾಭಕ್ಷ್, ಗೌರವಾಧ್ಯಕ್ಷ ಜಯದೇವ ಜೋಗಿಕಲಮಠ, ಉಪಾಧ್ಯಕ್ಷ ಸಿದ್ಧಯ್ಯಶಾಸ್ತ್ರೀ ನಂದೂರಮಠ, ಮುಖಂಡರಾದ ದೇವಿಂದ್ರ ದೊಡ್ಡಮನಿ, ಭೀಮ್ ಸಿಂಗ್ ಚೌವ್ಹಾಣ್, ಸುರೇಶ್ ನಾಟೇಕರ್, ರವಿ ಸಿಂಧಗಿ, ಆನಂದ ಆರ್.ಎನ್., ಮಲ್ಲಿಕಾರ್ಜುನ ಬಳಗಾರ, ವಿಠ್ಠಲ ರಾಠೋಡ, ಶ್ರೀಶೈಲ ಪುರಾಣಿಕ, ಈರಣ್ಣ ಯಲಗಟ್ಟಿ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.







