ಕಲಬುರಗಿ | ಸಿಜೆಐ ಗವಾಯಿ ಮೇಲೆ ಶೂ ಎಸೆತ ಘಟನೆ ಖಂಡಿಸಿ ಪ್ರತಿಭಟನೆ

ಕಲಬುರಗಿ: ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ಕೃತ್ಯವನ್ನು ಖಂಡಿಸಿ ದಲಿತ ಹಕ್ಕುಗಳ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳು ನಗರದ ತಿಮ್ಮಪುರಿ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದವು.
ಸಿಜೆಐ ಗವಾಯಿ ಅವರ ಮೇಲೆ ತೆರೆದ ನ್ಯಾಯಾಲಯದ ಕೋಣೆಯಲ್ಲಿ ಶೂ ಎಸೆಯುವ ಪ್ರಯತ್ನ ಮಾಡಲಾಗಿದೆ. ಆರೋಪಿಯು ಸನಾತನ ಧರ್ಮವನ್ನು ಬೆಂಬಲಿಸುವ ಘೋಷಣೆಗಳನ್ನು ಕೂಗಲಾಗಿದೆ ಎಂಬುದು ಅತ್ಯಂತ ಆಘಾತಕಾರಿ ಮತ್ತು ಶೋಚನೀಯ ಘಟನೆ. ಜಾತಿವಾದಿ, ಮನುವಾದಿ ಮತ್ತು ಕೋಮುವಾದಿ ವಿಚಾರಗಳನ್ನು ಉತ್ತೇಜಿಸುವ ಬಿಜೆಪಿ ಮುಖ್ಯಮಂತ್ರಿಗಳು, ಸಚಿವರು ಮತ್ತು ನಾಯಕರ ಇತ್ತೀಚಿನ ಹೇಳಿಕೆಗಳು ಅಂತಹ ದುಷ್ಕೃತ್ಯಗಳಿಗೆ ಧೈರ್ಯ ತುಂಬಿವೆ. ಈ ಘಟನೆಯು ಹಿಂದುತ್ವ ಕೋಮುವಾದಿ ಶಕ್ತಿಗಳು ಸಮಾಜಕ್ಕೆ ಮನುವಾದಿ ಮತ್ತು ಕೋಮು ವಿಷವನ್ನು ತುಂಬಿರುವುದಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಇದು ಸಂಘ ಪರಿವಾರದ ಅಸಹಿಷ್ಣುತೆ ಮತ್ತು ಅವರ ಸಿದ್ಧಾಂತಕ್ಕೆ ಹೊಂದಿಕೆಯಾಗದ ಯಾವುದೇ ಅಭಿಪ್ರಾಯವನ್ನು ಸ್ವೀಕರಿಸಲು ಇಷ್ಟವಿಲ್ಲದಿರುವುದನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಸಿಜೆಐ ಗವಾಯಿ ಅವರಿಗೆ ಕೇಂದ್ರ ಸರ್ಕಾರವು ಸಂಪೂರ್ಣ ರಕ್ಷಣೆ ನೀಡಬೇಕು, ಸರ್ಕಾರವು ಅಸಹಿಷ್ಣುತೆಯನ್ನು ಹರಡುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅದೇ ಸಮಯದಲ್ಲಿ ಪ್ರಜಾಪ್ರಭುತ್ವೀಯ ನೆಲೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಭಿನ್ನಾಭಿಪ್ರಾಯದ ಹಕ್ಕನ್ನು ರಕ್ಷಿಸಬೇಕು. ಮುಂದಕ್ಕೆ ಇಂತಹ ದುರ್ಘಟನೆಗಳು ನಡೆಯದಂತೆ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಗಟ್ಟಿಗೊಳಿಸುವಂತೆ- ಜಾರಿಗೊಳಿಸುವಂತೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಜ್ಞಾ ಕಾನೂನು ಸಲಹಾ ಸಮಿತಿ ಕಾರ್ಯದರ್ಶಿ ಕೆ.ನೀಲಾ, ದಲಿತ ಹಕ್ಕುಗಳ ಸಮಿತಿ ಸಂಚಾಲಕ ಸುಧಾಮ ಧನ್ನಿ, ದೇವದಾಸಿ ಮಹಿಳಾ ವಿಮೋಚನಾ ಸಂಘದ ಅಧ್ಯಕ್ಷೆ ಚಂದಮ್ಮ ಗೋಳಾ, ಪಾಂಡುರಂಗ ಮಾವಿನಕರ, ಡಿವೈಎಫ್ಐ ಅಧ್ಯಕ್ಷ ಲವಿತ್ರ ವಸ್ತ್ರದ, ಡಾ.ಪ್ರಭು ಖಾನಾಪುರೆ, ಸಿಐಟಿಯು ಅಧ್ಯಕ್ಷೆ ಶಾಂತಾ ಘಂಟಿ, ಕೋದಂಡರಾಮಪ್ಪ, ಪ್ರಮೋದ ಪಾಂಚಾಳ, ಸಲ್ಮಾನ್ ಖಾನ್, ಸರ್ವೇಶ, ಇಮಾಮ್, ಕೈಲಾಶ, ಸಿದ್ದಪ್ಪ ಹೊಸಮನಿ, ಶಾಂತೇಶ, ಮಲ್ಲಿಕಾರ್ಜುನ ಕಿಣ್ಣಿಸುಲ್ತಾನ ಸೇರಿದಂತೆ ಮತ್ತಿತರರು ಇದ್ದರು.







