ಕಲಬುರಗಿ | ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಭಾರತ ಮುಕ್ತಿ ಮೋರ್ಚಾ ಮತ್ತು ಯುನಿಟಿ ಆಫ್ ಮೂಲನಿವಾಸಿ ಬಹುಜನ ಸಂಘಟನೆ ಹಾಗೂ ಸ್ಲಂ ಜನರ ಸಂಘಟನೆಯ ನೂರಾರು ಕಾರ್ಯಕರ್ತರು ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಪ್ರತಿಭಟನೆ ಮಾಡುತ್ತಾ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಆಗಮಿಸಿ ನ್ಯಾ.ಬಿ.ಆರ್.ಗವಾಯಿ ಮೇಲೆ ಶೂ ಎಸೆದ ರಾಕೇಶ್ ಕಿಶೋರ್ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಸಮಾಜದ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸುಪ್ರೀಂ ಕೋರ್ಟನ ಮುಖ್ಯ ನ್ಯಾಯಾಧೀಶ ಬಿ.ಆರ್ ಗವಾಯಿಯವರ ಮೇಲೆ ಶೂ ಎಸೆಯಲು ಪ್ರಯತ್ನಿಸಿದ ರಾಕೇಶ್ ಕಿಶೋರ್ ಮೇಲೆ ಗೂಂಡಾ ಕಾಯ್ದೆ ಪ್ರಕರಣ ದಾಖಲಿಸಿ ಗಡಿ ಪಾರು ಮಾಡಿ ಸೂಕ್ತ ಕ್ರಮ ಜರುಗಿಸಬೇಕು ಎಂದು ತಿಳಿಸಲಾಗಿದೆ.
ಚಿಂಚೋಳಿ ಮತ್ತು ಕಾಳಗಿ ತಾಲೂಕಿನಲ್ಲಿ ಕೇಂದ್ರ ಸ್ಥಾನದಲ್ಲಿರುವ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಪಂಚಾಯತ್ ರಾಜ್ ಸಾಹಯಕ ಅಭಿಯಂತರರು, ಚಿಂಚೋಳಿ ಸಾಹಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ ಕೆಈಬಿ ಸಹಾಯಕ ಅಭಿಯಂತರರು ಇವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮತ್ತು ಇಲಾಖೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವಂತೆ ಸೂಚಿಸಬೇಕು ಎಂದು ತಿಳಿಸಲಾಗಿದೆ..
ಚಿಂಚೋಳಿ ಮತ್ತು ಕಾಳಗಿ ತಾಲೂಕಿನಲ್ಲಿ ಬಿ.ಸಿ.ಎಮ್ ವಸತಿ ನಿಲಯಗಳಿಗೆ ಮತ್ತು ಸಮಾಜ ಕಲ್ಯಾಣ ವಸತಿ ನಿಲಯಗಳಿಗೆ ಮತ್ತು ಮೈನಾರಿಟಿ ವಸತಿ ನಿಲಯಗಳಿಗೆ ಆಹಾರ ಧಾನ್ಯ ಸರಬರಾಜು ಮಾಡುವ ಗುತ್ತಿಗೆದಾರರು ಪ್ರತಿಯೊಂದು ವಸತಿ ನಿಲಯಗಳಿಗೆ ಆಹಾರ ಧಾನ್ಯ ಸರಬರಾಜು ಮಾಡದೇ ವಸತಿ ನಿಲಯಗಳ ಮೆಲ್ವಿಚಾರಕರಿಗೆ ಹಣ ನೀಡಿ ವಿದ್ಯಾರ್ಥಿಗಳ ಹೊಟ್ಟೆ ಮೇಲೆ ಹೊಡೆಯುತ್ತಿರುವ ಗುತ್ತಿಗೆದಾರರ ಪರವಾನಿಗೆ ಕಪ್ಪು ಪಟ್ಟಿಗೆ ಸೇರಿಸಿ ಸೂಕ್ತ ಕ್ರಮ ಜರುಗಿಸಬೇಕು. ರಾಜಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಸಾಲೊಳ್ಳಿ ಗ್ರಾಮದ ಮೈಬು ಸುಬಾನಿ ದರ್ಗಾದಿಂದ ಬಿಲಾಲ್ ಮಸೀದಿವರೆಗೆ ಸಿಸಿ ರಸ್ತೆ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದ್ದರು.
ಐನಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಗ್ರಂಥಾಲಯವನ್ನು ಈಗಿನ ಪೋಸ್ಟ್ ಕಚೇರಿಯಿಂದ ಪಂಚಾಯತ್ ಮಹಡಿಯ ಮೇಲೆ ಸ್ಥಳಾಂತರಿಸುವುದು, ಕೊಡ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಂಠಾಣ್ ಗ್ರಾಮದಲ್ಲಿ ಮಹಿಳಾ ಶೌಚಾಲಯ ನಿರ್ಮಿಸುವುದು ಮತ್ತು ಜನಜೀವನ ಕಳಪೆ ಕಾಮಗಾರಿಯಿಂದ ಮನೆ ಮನೆಗೆ ನೀರು ಸರಿಯಾಗಿ ಒದಗಿಸುತ್ತಿಲ್ಲ ಎಂಬ ಸಮಸ್ಯೆಗಳಿಗೆ ತಕ್ಷಣ ತನಿಖೆ ನಡೆಸಬೇಕು ಎಂದು ತಿಳಿಸಲಾಗಿದೆ.
ಚಂದನಕೇರಾ ಗ್ರಾಮ ಪಂಚಾಯಿತಿಯ 2ನೇ ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವಂತೆ ಸೂಚಿಸಲಾಗಿದೆ. ಚಿಂಚೋಳಿ ತಾಲ್ಲೂಕಿನ ಬಸಂತಪೂರ, ನಿಡಗುಂದಾ, ಗಡಿಕೇಶ್ವಾರ, ವೆಂಕಟಪೂರ ಮತ್ತು ಸಿರೊಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ 2022-2023 ರಿಂದ 2024-2025ರ ಹಣಕಾಸು ಮತ್ತು ಅಂಗವಿಕಲರ ಅನುದಾನದಲ್ಲಿ ಕಂಡುಬಂದ ಅವ್ಯವಹಾರದ ಕುರಿತು ಕೂಡಲೇ ತನಿಖೆ ನಡೆಸಿ, ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾರುತಿ ಗಂಜಗೇರಿ, ಅಲ್ಲಮಪ್ರಭು ನಿಂಬರ್ಗಾ, ಮೋಹನ್ ಐನಾಪುರ, ಗೋಪಾಲ ಗಾರಂಪಳ್ಳಿ, ಜೈಭೀಮ ಹೋಳಕರ್, ಸುಂಠಾಣ, ಹರೀಶ ದೇಗಲ್ಮಡಿ, ಮಲ್ಲಿಕಾರ್ಜುನ ಗಂವ್ಹಾರ, ಹರ್ಷವರ್ಧನ, ಅವಿರೋಧ ಚಂದನಕೇರಾ, ರೇಣುಕಾ, ಲಲಿತಾ, ಶೋಭಾ, ಗುಂಡಮ್ಮ, ರಾಧಿಕಾ, ಸರಸ್ವತಿ, ಜಗಮ್ಮ, ಪಾರ್ವತಿ, ಸೋಹೆಲ್ ಸೇರಿದಂತೆ ಇನ್ನಿತರರಿದ್ದರು.







