ಕಲಬುರಗಿ | ಮಹಾವಿಹಾರ ಮುಕ್ತಿ ಆಂದೋಲನ ಬೆಂಬಲಿಸಿ ಎ.1ರಂದು ಪ್ರತಿಭಟನೆ

ಕಲಬುರಗಿ : ಬಿಟಿ ಕಾಯ್ದೆ 1949 ರದ್ದುಗೊಳಿಸಿ ಮಹಾಬೋಧಿ ಮಹಾ ವಿಹಾರದ ಆಡಳಿತ ಸಂಪೂರ್ಣ ಬೌದ್ಧರಿಗೆ ನೀಡಬೇಕು ಎಂದು ಒತ್ತಾಯಿಸಿ ಬುದ್ಧ ಗಯಾದಲ್ಲಿ ನಡೆದಿರುವ ಮಹಾಬೋಧಿ ಮಹಾವಿಹಾರ ಮುಕ್ತಿ ಆಂದೋಲನ ಬೆಂಬಲಿಸಿ ಎ.1ರಂದು 12.30ಕ್ಕೆ ನಗರದ ಜಗತ್ ವೃತ್ತದಲ್ಲಿನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಬೌದ್ಧ ಉಪಾಸಕ, ಉಪಾಸಕಿಯರ ಜಿಲ್ಲಾ ಸಮಿತಿ ಹಾಗೂ ಸಮಸ್ತ ದಲಿತ ಸಂಘಟನೆಗಳ ಪ್ರಮುಖ ದೇವೆಂದ್ರ ಹೆಗಡೆ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವಿರಾರು ಸಂಖ್ಯೆಯಲ್ಲಿ ಅಂದಿನ ಪ್ರತಿಭಟನೆಯಲ್ಲಿ ಕಾರ್ಯಕರ್ತರು, ದಲಿತ ಸಂಘಟನೆಗಳ ನಾಯಕರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಮಸ್ತ ಬೌದ್ಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ನೌಕರರು, ವಿದ್ಯಾರ್ಥಿ, ಯುವ ಜನರು ಪಾಲ್ಗೊಳ್ಳುವರು ಎಂದರು.
ಕಳೆದ ಫೆ.12ರಂದು ಆಮರಣ ಉಪವಾಸ ಸತ್ಯಾಗ್ರಹ ಪ್ರಾರಂಭವಾಗಿದೆ. ಇದರಿಂದ ಕ್ರೋಧಗೊಂಡ ಬಿಹಾರ್ ಸರ್ಕಾರ ಹಾಗೂ ಕೇಂದ್ರದ ಮೋದಿ ಸರ್ಕಾರ ಕಳೆದ ಫೆ.27ರಂದು ರಾತ್ರಿ 12 ಗಂಟೆಗೆ ಸತ್ಯಾಗ್ರಹ ನಿರತ ಬೌದ್ಧ ಭಿಕ್ಕುಗಳ ಮೇಲೆ ಅಮಾನುಷವಾಗಿ ದೌರ್ಜನ್ಯ ಎಸಗಿದ್ದಾರೆ. ದೃಢ ಸಂಕಲ್ಪ ಬಿಟ್ಟು ಕೊಡದ ಭಂತೇಜಿಗಳು ದೂರದ ದೋಮೋಹನ್ ಸ್ಥಳದಲ್ಲಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ. ಈ ಹೋರಾಟಕ್ಕೆ ಬೆಂಬಲಿಸಿ ಜಿಲ್ಲಾ ಮಟ್ಟದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮರೆಪ್ಪ ಹಳ್ಳಿ, ಸೂರ್ಯಕಾಂತ್ ನಿಂಬಾಳಕರ್, ಅರ್ಜುನ್ ಭದ್ರೆ, ಹಣಮಂತ್ ಬೋಧನಕರ್, ಹಣಮಂತ್ ಯಳಸಂಗಿ, ಶಾಂತಪ್ಪ ಕೂಡಲಗಿ, ಸಂತೋಷ್ ಮೇಲಿನಮನಿ, ಬಸವರಾಜ್ ಬೆಣ್ಣೂರ್, ದಿನೇಶ್ ದೊಡ್ಡಮನಿ, ಪ್ರಕಾಶ್ ಔರಾದಕರ್, ದೇವಿಂದ್ರ ಸಿನೂರ್, ಲಕ್ಷ್ಮೀಕಾಂತ್ ಹುಬಳಿ ಇತರರಿದ್ದರು.







