ಕಲಬುರಗಿ | ಕಲ್ಯಾಣ ಕರ್ನಾಟಕಕ್ಕೆ ಲಕ್ಷ ಕೋಟಿ ರೂ. ಅನುದಾನ ನೀಡಿ: ಡಾ.ಸುಧಾ ಹಾಲಕೈ

ಕಲಬುರಗಿ: ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್‌ನಲ್ಲಿ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಪ್ರದೇಶವಾಗಿರುವ ಕಲ್ಯಾಣ ಕರ್ನಾಟಕಕ್ಕೆ ಅತಿಕಡಿಮೆ ಅನುದಾನ ಕೊಡುವ ಮೂಲಕ ಕಲ್ಯಾಣಕ್ಕೆ ಅಭಿವೃದ್ಧಿಗೆ ಕಾಂಗ್ರೆಸ್ ಸರಕಾರ ಶೂನ್ಯ ಅನುದಾನ ನೀಡಿದೆ ಎಂದು ಬಿಜೆಪಿ ರಾಜ್ಯ ವೈದ್ಯಕೀಯ ಪ್ರಕೋಷ್ಠದ ರಾಜ್ಯ ಸದಸ್ಯೆ ಡಾ.ಸುಧಾ ಹಾಲಕೈ ಆರೋಪಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿರುವ 17,500 ಖಾಲಿ ಹುದ್ದೆಗಳನ್ನು ಭರ್ತಿ ಮಾಡದೆ ರಾಜ್ಯ ಸರಕಾರವು ಯುವಕರನ್ನು ನಿರುದ್ಯೋಗಿಗಳನ್ನಾಗಿ ಮಾಡಿದೆ, ಈ ಪ್ರದೇಶದಲ್ಲಿ ಹರಿಯುವ ಭೀಮಾ ನದಿ ತೀರದ ಹೆಸರಿನಲ್ಲಿ ಕೊಲೆ ಸುಲಿಗೆ, ಮಹಿಳೆಯರ ಮೇಲೆ ದೌರ್ಜನ್ಯ, ಅಪೌಷ್ಟಿಕಾಂಶದ ಕೊರತೆ ಸೇರಿದಂತೆ ಹಲವು ಸಮಸ್ಯೆಗಳು ಎದ್ದು ಕಾಣುತ್ತಿವೆ, ಆದರೆ ಅಭಿವೃದ್ಧಿಗೆ ಬೇಕಾಗುವ ಲಕ್ಷಾಂತರ ಕೋಟಿ ರೂ. ಗಳ ಅನುದಾನದ ಬರ ಎದುರಿಸಲಾಗುತ್ತಿದೆ ಎಂದು ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂವಿಧಾನದ ಕಲಂ 371 ಜೆ ತಿದ್ದುಪಡಿ ಬಂದು ಯಾವುದೇ ಲಾಭವಾಗಿಲ್ಲ, ಕಲಬುರಗಿ ಜಿಲ್ಲೆಯಲ್ಲಿ ಸುಮಾರು 131 ಕಿ.ಮಿ. ದೂರ ಹರಿಯುವ ಭೀಮಾ ನದಿಯ ನೀರು ಹಿಡಿದಿಡುವ ಯಾವುದೇ ಕೆಲಸಗಳಿಲ್ಲ, ಭೀಮಾ ನದಿಯ ನೀರಿನಿಂದ ಭೀಮಾತೀರವನ್ನು ಕೊಲೆಗಾರರ ಬೀಡಾಗಿಸುವುದನ್ನು ತಪ್ಪಿಸಿ ಹಸಿರೀಕರಣಕ್ಕೆ ಒತ್ತು ನೀಡಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಪ್ನಾ ಮಂಗಲಗಿ ಇದ್ದರು.





