ಕಲಬುರಗಿ| ಮಾರಕಾಸ್ತ್ರಗಳನ್ನು ಹಿಡಿದು ಯುವಕರ ರೀಲ್ಸ್ : ವೈರಲ್ ಬೆನ್ನಲ್ಲೇ ಪ್ರಕರಣ ದಾಖಲು

ಕಲಬುರಗಿ: ನಗರದ ದೇವಿ ನಗರದಲ್ಲಿ ನಾಲ್ವರು ಯುವಕರು ಹರಿತವಾದ ಆಯುಧಗಳನ್ನು (ಮಚ್ಚುಗಳನ್ನು) ಹಿಡಿದುಕೊಂಡು ಸಾರ್ವಜನಿಕರಿಗೆ ಬೆದರಿಸುತ್ತ ಮಾರಕಾಸ್ತ್ರಗಳನ್ನು ಪ್ರದರ್ಶಿಸಿದ ವಿಡಿಯೋ ಇನ್ಸ್ ಟಾಗ್ರಾಂನಲ್ಲಿ ವೈರಲ್ ಆಗಿರುವ ಬೆನ್ನಲ್ಲೇ ನಾಲ್ವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿನ ಮಹಾತ್ಮಾ ಗಾಂಧಿ ಕಾಲೋನಿಯ ಕಿರಣ, ತಾಜ ಸುಲ್ತಾನಪೂರದ ಕಿರಣ ಠಾಕೂರ್ ನರಸಿಂಗ್ ಠಾಕೂರ್, ದೇವಿ ನಗರದ ಶರಣು ಬಿರಾದಾರ ಹಾಗೂ ಮತ್ತೊರ್ವನ ವಿರುದ್ದ ನಗರದ ಆರ್.ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆ.19 ರ ಬೆಳಗ್ಗೆ 11 ಗಂಟೆಗೆ ಇನ್ಸ್ ಟಾಗ್ರಾಂನಲ್ಲಿ ನಾಲ್ವರು ಯುವಕರು ತಮ್ಮ ಕೈಯಲ್ಲಿ ಮಚ್ಚುಗಳನ್ನು ಹಿಡಿದುಕೊಂಡು ವಿಡಿಯೋ ಮಾಡಿದ್ದಲ್ಲದೆ ಸಾರ್ವಜನಿಕರಿಗೆ ಹೆದರಿಸುವುದು ಮಾಡುತ್ತ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದ ವಿಡಿಯೋ ವೈರಲ್ ಆಗಿದೆ. ಇದನ್ನು ಗಮನಿಸಿದ ಪೊಲೀಸರು, ಸಾರ್ವಜನಿಕ ಸ್ಥಳಗಳಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಹೆದರಿಸುತ್ತಿದ್ದಾರೆ ಎಂಬ ಮಾಹಿತಿ ಸಾರ್ವಜನಿಕರಿಂದ ಗೊತ್ತಾದ ಮೇಲೆ ಅವರ ವಿರುದ್ಧ ಕಾನೂನು ಕ್ರಮಕ್ಕಾಗಿ ಎಫ್ಐಆರ್ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ರಾಘವೇಂದ್ರ ನಗರ (ಆರ್.ಜಿ ನಗರ) ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 105/ 2025 ಕಲಂ 25(1) (a) arms ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.







