ಕಲಬುರಗಿ | ರಿಯಾಜ್ ಅಹ್ಮದ್ ಬೋಡೆ ಅವರ ಅನುವಾದಿತ “ಅಮೀರ್ ಖುಸ್ರೋ ಕಾವ್ಯಲೋಕ” ಪುಸ್ತಕ ಬಿಡುಗಡೆ

ಕಲಬುರಗಿ : ಒಂದು ಭಾಷೆಯ ಕಾವ್ಯವನ್ನು ಮತ್ತೊಂದು ಭಾಷೆಗೆ ಅನುವಾದಿಸುವುದು ಚಾರಿತ್ರಿಕ ಗ್ರಂಥವನ್ನು ಅನುವಾದಿಸುವಷ್ಟು ಸುಲಭವಲ್ಲ. ಮೂಲ ಲೇಖಕನ ಭಾವನೆಗಳಿಗೆ ಧಕ್ಕೆ ಬಾರದಂತೆ ಕಾವ್ಯವನ್ನು ಅನುವಾದಿಸುವುದು ಮಹತ್ತರ ಕೌಶಲ್ಯ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಭಾಷಾ ವಿಭಾಗದ ಡೀನ್ ಪ್ರೊ.ವಿಕ್ರಮ ವಿಸಾಜಿ ಹೇಳಿದರು.
ಗುಲ್ಬರ್ಗಾ ವಿಶ್ವವಿದ್ಯಾಲಯದ ಡೀನ್ ಪ್ರೊ.ಅಬ್ದುಲ್ ರಬ್ ಉಸ್ತಾದ್ ಅವರು ರಿಯಾಜ್ ಅಹ್ಮದ್ ಬೋಡೆ ಅವರ “ಅಮೀರ್ ಖುಸ್ರೋ ಕಾವ್ಯಲೋಕ” ಪುಸ್ತಕವನ್ನು ಬಿಡುಗಡೆಗೊಳಿಸಿ, ಬೋಡೆ ಅವರು ಮೂಲತಃ ಸಾಹಿತ್ಯ ವಿದ್ಯಾರ್ಥಿಯಲ್ಲದಿದ್ದರೂ ಸಾಹಿತ್ಯವನ್ನು ಬದುಕಿನ ಭಾಗವಾಗಿಸಿಕೊಂಡಿದ್ದಾರೆ. ಅವರ ಕುಟುಂಬ ಹಾಗೂ ತಿಮ್ಮಾಪುರಿ ಗ್ರಾಮದ ಸಾಹಿತ್ಯ ವಾತಾವರಣದಿಂದಲೇ ಈ ಪ್ರೇರಣೆ ದೊರಕಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಲೋಕ ಇದುವರೆಗೆ ಉರ್ದು–ಪಾರ್ಸಿ–ಅರೇಬಿಕ್ ಸಾಹಿತ್ಯದ ಅನುಭವವನ್ನು ಒಳಗೊಳ್ಳುವ ಪ್ರಯತ್ನ ಮಾಡಿರಲಿಲ್ಲ. ಈಗ ಬೋಡೆ ಅವರು ಆ ಅಪರಿಚಿತ ಸಾಹಿತ್ಯ ಲೋಕವನ್ನು ಕನ್ನಡಕ್ಕೆ ತಂದಿದ್ದಾರೆ. ಅನುವಾದದಲ್ಲಿ ಕೇವಲ ಮೂಲದ ಪ್ರತಿಕೃತಿಗಿಂತ, ಕನ್ನಡದ ಅನುಭವಲೋಕಕ್ಕೆ ಹೇಗೆ ಒಗ್ಗಿಸಿಕೊಳ್ಳಬಹುದು ಎಂಬ ಅರಿವು ಮುಖ್ಯ ಎಂದರು.
ಅಮೀರ್ ಖುಸ್ರೋ ಅವರು ಪಾರ್ಸಿ, ಉರ್ದು, ಹಿಂದಿ, ಬ್ರಜ್ ಸೇರಿದಂತೆ ಅನೇಕ ಭಾಷೆಗಳ ಸಮನ್ವಯದ ಕವಿ. ಜನರಿಂದಲೇ ‘ತೂತಿಯೇ ಹಿಂದುಸ್ತಾನ್’ (ಹಿಂದೂಸ್ತಾನದ ಕೋಗಿಲೆ) ಎಂದು ಕರೆಯಲ್ಪಟ್ಟರು. ಪ್ರೇಮ ಮತ್ತು ಸೂಫಿ ತತ್ತ್ವಗಳ ಮೂಲಕ ಭಾರತೀಯ ಸಂಗೀತಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದರು.
ಡಾ. ಪರ್ವೀನ್ ಸುಲ್ತಾನಾ ಅವರು ಮಾತನಾಡಿ, ಸೂಫಿಗಳ ಕೊಡುಗೆ ಎಂದರೆ ಸೌಹಾರ್ದತೆ. ಅದು ಇಂದಿನ ಕಾಲಕ್ಕೆ ಅತ್ಯಂತ ಅಗತ್ಯ ಎಂದು ಹೇಳಿದರು.
ರಿಯಾಜ್ ಅಹ್ಮದ್ ಬೋಡೆ ಅವರು ಮಾತನಾಡಿ, ನಮಗೆ ಆಂಗ್ಲ ಮತ್ತು ಯೂರೋಪಿಯನ್ ಸಾಹಿತ್ಯ ಕನ್ನಡದಲ್ಲಿ ಸಿಗುತ್ತದೆ. ಆದರೆ, ನಮ್ಮದೇ ಬಂದೇನವಾಝ್ ಅವರ ಕೃತಿಗಳು ಪರಿಚಯವಾಗಿಲ್ಲ. ಈ ಕೊರತೆಯ ನಿವಾರಣೆಗೆ ನಾನು ಖುಸ್ರೋ ಕಾವ್ಯವನ್ನು ಅನುವಾದಿಸಲು ಮುಂದಾದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೊ.ಎಚ್.ಟಿ. ಪೋತೆ ಅವರು, ಕಲ್ಯಾಣ ಕರ್ನಾಟಕದಲ್ಲಿ ವಚನ ಮತ್ತು ಸೂಫಿ ತತ್ತ್ವದ ಅಧ್ಯಯನಕ್ಕೆ ತೀವ್ರ ಅಗತ್ಯವಿದೆ. ಬೋಡೆ ಅವರ ಅನುವಾದ ಕಾರ್ಯ ಆ ಕೊರತೆಯನ್ನು ಸ್ವಲ್ಪ ಮಟ್ಟಿಗೆ ನೀಗಿಸಿದೆ ಎಂದರು.
ಡಾ.ಪ್ರಕಾಶ ಸಂಗಮ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಡಾ.ಶಿವಶರಣಪ್ಪ ಕೊಡ್ಲಿ ಅವರು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಹಿರಿಯರಾದ ಅಪ್ಪಾರಾವ ಅಕ್ಕೋಣಿ, ಪಿ.ನಂದಪ್ಪ, ಡಿ.ನದಾಫ್, ಡಾ.ಸೂರ್ಯಕಾಂತ ಸುಜ್ಯಾತ್, ಡಾ.ಹನುಮಂತ ಮೇಲಕೇರಿ, ಕನ್ನಡ ವಿಭಾಗದ ಉಪನ್ಯಾಸಕ ವೃಂದದವರು ಭಾಗವಹಿಸಿದ್ದರು.







