ಕಲಬುರಗಿ | ಮಹಾರಾಷ್ಟ್ರದ ಉಜನಿ ಡ್ಯಾಂನಿಂದ ಭೀಮಾನದಿಗೆ ನೀರು ಹರಿಸಲು ಡಿಸಿಎಂಗೆ ಮನವಿ

ಕಲಬುರಗಿ: ಭೀಮಾನದಿಗೆ ಮಹಾರಾಷ್ಟ್ರದ ಉಜನಿ ಡ್ಯಾಂನಿಂದ ಕರ್ನಾಟಕದ ಭೀಮಾನದಿಗೆ ನೀರು ಹರಿಸಬೇಕೆಂದು ಜ್ಯಾತ್ಯಾತೀತ ಜನತಾದಳ (ಜಾ) ಜಿಲ್ಲಾ ಕಾರ್ಯದರ್ಶಿ ರಾಜಕುಮಾರ ಅ.ಬಡವಾಳ ಅವರು ನೇತೃತ್ವದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಬೆಂಗಳೂರಿನಲ್ಲಿ ನಿಯೋಗ ಭೇಟಿ ನೀಡಿ ಮನವಿ ಸಲ್ಲಿಸಿದರು.
ಕಲಬುರಗಿ ಮತ್ತು ವಿಜಯಪುರ, ಯಾದಗಿರಿ ಜಿಲ್ಲೆಯ ರೈತರು ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ 1976ರಲ್ಲಿ ಬಚಾವತ್ ಆಯೋಗದ ತೀರ್ಪಿನಂತೆ ಮಹಾರಾಷ್ಟ್ರಕ್ಕೆ 95 ಟಿ.ಎಂ.ಸಿ ಮತ್ತು ಕರ್ನಾಟಕಕ್ಕೆ 15 ಟಿ.ಎಂ.ಸಿ ನೀರು ಹಂಚಿಕೆ ಮಾಡಲಾಗಿತ್ತು. ಮಹಾರಾಷ್ಟ್ರವು ಕೇಂದ್ರ ಜಲಸಂಪನ್ಮೂಲ ಅನುಮತಿಯನ್ನು ಪಡೆಯದೆ 25 ಕಿ.ಮೀ ಸರುಂಗ ಮಾರ್ಗವನ್ನು ಕರೆದು 15 ಟಿ.ಎಂ.ಸಿ ನೀರನ್ನು ಸೇನಾ ನದಿಗೆ ಬಿಟ್ಟುಕೊಳ್ಳುತ್ತಿದೆ. ಕರ್ನಾಟಕ ಭಾಗದ ರೈತರ ಜೀವನಾಡಿಯಾದ ಭೀಮಾನದಿ ಬೇಸಿಗೆ ಕಾಲದಲ್ಲಿ ಬತ್ತಿಹೋಗಿ ರೈತರು ಕಂಗಾಲಾಗುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮನವಿ ಸ್ವೀಕರಿಸಿ ಸಮಸ್ಯೆ ಇತ್ಯಾರ್ಥದ ಭರವಸೆ ನೀಡಿದ್ದಾರೆ ಎಂದು ನಿಯೋಗ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸಂದರ್ಭದಲ್ಲಿ ಸೋಮಶೇಖರ ದೇಶಮುಖ್, ಸುನೀಲ ಹೊಸಮನಿ, ನಾಗಣ್ಣ ವಾರದ ಬೈಲಪ್ಪ ಪಟ್ಟೇದಾರ, ಮಾರುತಿ ಚವ್ಹಾಣ ಸೇರಿದಂತೆ ಇತರರು ಇದ್ದರು.





