ಕಲಬುರಗಿ | ತಳವಾರ ಜನಾಂಗಕ್ಕೆ ಜಾತಿ ಪ್ರಮಾಣ ಪತ್ರ ನೀಡುವಂತೆ ಸಚಿವ ಪ್ರಿಯಾಂಕ್ ಖರ್ಗೆಗೆ ಮನವಿ

ಕಲಬುರಗಿ: ತಳವಾರ ಜನಾಂಗಕ್ಕೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡುವಂತೆ ಸರಕಾರದಿಂದ ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಕೋಲಿ, ಕಬ್ಬಲಿಗ ಎಸ್.ಟಿ ಹೋರಾಟ ಸಮಿತಿ ಹಾಗೂ ಕರ್ನಾಟಕ ರಾಜ್ಯ ತಳವಾರ ಸಮಾಜ ಸಂಘಟನೆಯ ಪದಾಧಿಕಾರಿಗಳು ಜಂಟಿಯಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ ಹಾಗೂ ಐಟಿಬಿಟಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದರು.
ಸರ್ಕಾರ ತಳವಾರ, ಪರಿವಾರ ಜನಾಂಗಕ್ಕೆ ಅವರವರ ಸೂಕ್ತ ದಾಖಲೆಗಳು ಮತ್ತು ಸರಕಾರದ ನಿಯಮಗಳಂತೆ, ಪಂಚನಾಮೆ ಇತ್ಯಾದಿಗಳನ್ನು ಪರಿಶೀಲಿಸಿ, ನೀಡಬೇಕಾಗಿರುವ ತಳವಾರ, ಪರಿವಾರ, ಜನಾಂಗದ ಪ್ರಮಾಣ ಪತ್ರ ತಡೆಹಿಡಿಯಲಾಗಿದೆ. ಇದರಿಂದ ಸರಕಾರಿ ಹುದ್ದೆಗಳಲ್ಲಿ ಆಯ್ಕೆಯಾಗಿರುವ ಅನೇಕ ಫಲಾನುಭವಿಗಳಿಗೆ, ಸಿಂಧುತ್ವ ಪ್ರಮಾಣ ಪತ್ರ ನೀಡದೇ ಅನ್ಯಾಯ ವ್ಯಸಗಲಾಗುತ್ತಿದೆ ಮತ್ತು ವಿಶೇಷವಾಗಿ ಗಮನಿಸಬೇಕಾಗಿರುವ ವಿಷಯವೇನೆಂದರೆ, ರಾಜ್ಯದಲ್ಲಿ ಈಗಾಗಲೇ ಪರಿಶಿಷ್ಟ ಪಂಗಡದಲ್ಲಿರುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕೆಲವು ರಾಜಕೀಯ ಪ್ರಭಾವಿಗಳು, ಸದರಿ ಪರಿಶಿಷ್ಟ ಪಂಗಡದ ಸೌಲಭ್ಯಗಳು ಮಾತ್ರ ಕೆಲವೇ, ಕೆಲವು ಜಾತಿ ಜನಾಂಗಕ್ಕೆ ಸೀಮಿತವಾಗಬೇಕನ್ನುವ ಹುನ್ನಾರದಿಂದ ವಿನಾಕಾರಣ ಸರಕಾರ ಹಾಗೂ ಜಿಲ್ಲಾಧಿಕಾರಿಗಳ ಮೇಲೆ ಒತ್ತಡಹೇರಿ ದುರ್ಬಲ ಜನಾಂಗಕ್ಕೆ ನಿರಂತರವಾಗಿ ಅನ್ಯಾಯ ಮಾಡುತ್ತಿದ್ದಾರೆ. ಸಂವಿಧಾನಬದ್ಧವಾದ ನ್ಯಾಯ ದೊರಕಿಸಿ ರಾಜ್ಯ ಸರಕಾರ ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಸಮಿತಿಯ ರಾಜ್ಯಾಧ್ಯಕ್ಷ ಲಚ್ಚಪ್ಪ ಎಸ್.ಜಮಾದಾರ, ಕರ್ನಾಟಕ ರಾಜ್ಯ ತಳವಾರ ಸಮಾಜ ಸಂಘಟನೆ ರಾಜ್ಯಾಧ್ಯಕ್ಷ ಡಾ.ಸರದಾರ ರಾಯಪ್ಪ, ರೇವಣಸಿದ್ದ ಕಮಾನಮನಿ, ರಾಜ್ಯ ಸಲಹೆಗಾರ ಹಣಮಂತ ಸಂಕನೂರ, ರಾಜ್ಯಕೋಶಾಧ್ಯಕ್ಷ ಪಿಂಟು ಜಮಾದಾರ, ರಾಜ್ಯ ಉಪಾಧ್ಯಕ್ಷರಾದ ರಾಮಲಿಂಗ ನಾಟಿಕಾರ, ಮಲ್ಲಿಕಾರ್ಜುನ ಗುಡಬಾ, ಸೇಡಂ ತಾಲೂಕಾಧ್ಯಕ್ಷ ನಾಗೇಂದ್ರಪ್ಪ ಲಿಂಗಂಪಲ್ಲಿ, ಕಮಲಾಪೂರ ಅಧ್ಯಕ್ಷ ಅಂಬಾರಾಯ ಜವಳಗಾ, ಚಿತ್ತಾಪೂರ ಅಧ್ಯಕ್ಷ ನಿಂಗಣ್ಣ ಹೆಗಲೇರಿ, ಕಲಬುರಗಿ ತಾಲೂಕ ಅಧ್ಯಕ್ಷ ಶಿವರಾಜ ಹಿಂಚಗೇರಿ, ಜೇವರ್ಗಿ ಅಧ್ಯಕ್ಷ ರೇವಣಸಿದ್ದ ಕಮಾನಮನಿ, ಶಹಾಬಾದ ಅಧ್ಯಕ್ಷ ಶಿವು ತಳವಾರ, ಗ್ರಾಮೀಣ ಅಧ್ಯಕ್ಷ ಉಮೇಶ ಕುರಿಕೋಟಾ, ಯಡ್ರಾಮಿ ಅಧ್ಯಕ್ಷ ರಾಚಣ್ಣ ತಳವಾರ, ಚಿಂಚೋಳಿ ಅಧ್ಯಕ್ಷ ಅನಿಲ ಜಮಾದಾರ, ಸೇರಿದಂತೆ ಇತರರು ಇದ್ದರು.







