Kalaburagi | ರೌಡಿ ಶೀಟರ್ ರವಿಕುಮಾರನಿಗೆ ಗುಂಡಾ ಕಾಯ್ದೆ: ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಬಂಧನ ಆದೇಶ

ಕಲಬುರಗಿ : ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿ ಶೀಟರ್ ರವಿಕುಮಾರ @ ರವಿ @ ರವ್ಯಾ (37) ವಿರುದ್ಧ ಗುಂಡಾ ಕಾಯ್ದೆಯಡಿ ಕ್ರಮ ಕೈಗೊಂಡು ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿಡಲು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ ಆದೇಶ ಹೊರಡಿಸಿದ್ದಾರೆ.
ರೈಲ್ವೆ ಕ್ವಾರ್ಟರ್ಸ್ ಹನುಮಾನನಗರದ ಸಿ.ಜೆ ಕಾಲೋನಿಯ ನಿವಾಸಿಯಾಗಿರುವ ರವಿಕುಮಾರ ತುಕಾರಾಮ ಕೂಲಿ ಕೆಲಸ ಮಾಡಿಕೊಂಡಿದ್ದು, ಈತನ ವಿರುದ್ಧ ಕಲಬುರಗಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಗಂಭೀರ ಪ್ರಕರಣಗಳು ದಾಖಲಾಗಿವೆ.
ಪೊಲೀಸರ ಮಾಹಿತಿಯಂತೆ, 2008ರಿಂದ 2026ರವರೆಗೆ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ 18 ಪ್ರಕರಣಗಳು, ಭಾರತೀಯ ನ್ಯಾಯ ಸಂಹಿತೆ-2023 ಅಡಿಯಲ್ಲಿ 2 ಪ್ರಕರಣಗಳು, ಸಿಆರ್‌ಪಿಸಿ ಅಡಿಯಲ್ಲಿ 2 ಪ್ರಕರಣಗಳು ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಅಡಿಯಲ್ಲಿ 2 ಪ್ರಕರಣಗಳು ಸೇರಿ ಒಟ್ಟು 24 ಪ್ರಕರಣಗಳು ದಾಖಲಾಗಿವೆ.
ಆರೋಪಿತನನ್ನು ‘ಎ’ ವರ್ಗದ ರೌಡಿ ಶೀಟರ್ ಎಂದು ಗುರುತಿಸಲಾಗಿದ್ದು, ಪ್ರಸ್ತುತವೂ ರೌಡಿ ಶೀಟ್ ಚಾಲ್ತಿಯಲ್ಲಿದೆ. ಕೊಲೆ, ಕೊಲೆಗೆ ಯತ್ನ, ದರೋಡೆ, ಸುಲಿಗೆ, ಕಳ್ಳತನ, ಮಹಿಳೆಯರ ಮೇಲೆ ಹಲ್ಲೆ, ಜೀವ ಬೆದರಿಕೆ, ಮಾರಣಾಂತಿಕ ಹಲ್ಲೆ ಹಾಗೂ ಮಾರಕಾಸ್ತ್ರ ಹೊಂದಿಕೆ ಸೇರಿದಂತೆ ಹಲವು ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಜಗಳ, ಮಾರಕಾಸ್ತ್ರಗಳಿಂದ ಹಲ್ಲೆ, ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುತ್ತಿರುವ ಹಿನ್ನೆಲೆಯಲ್ಲಿ ಈತನ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.






