ಕಲಬುರಗಿ | ಮಳೆಯಿಂದ ಹಾನಿಯಾದ ಪ್ರತಿ ಎಕರೆಗೆ 25 ಸಾವಿರ ರೂ. ಘೋಷಿಸಿ: ಭೀಮಾಶಂಕರ ಮಾಡ್ಯಾಳ

ಕಲಬುರಗಿ: ಕಳೆದ ತಿಂಗಳಲ್ಲಿ ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿದ ಮಳೆಯಿಂದ ರೈತರು ಬೆಳೆದಿರುವ ಬೆಳೆ ಸಂಪೂರ್ಣ ಹಾಳಾಗಿದ್ದು, ನಷ್ಟವಾಗಿರುವ ಬೆಳೆಗೆ ಪ್ರತಿ ಎಕರೆಗೆ 25 ಸಾವಿರ ರೂ. ತುರ್ತು ಪರಿಹಾರಧನ ಘೋಷಿಸಬೇಕು ಎಂದು ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ಭೀಮಾಶಂಕರ ಮಾಡ್ಯಾಳ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಪ್ರದೇಶದಲ್ಲಿ ಬೆಳೆದಿರುವ ಉದ್ದು, ಹೆಸರು, ತೊಗರಿ, ಹತ್ತಿ, ಸೋಯಾಬಿನ್, ಸೇರಿದಂತೆ ಟೊಮ್ಯಾಟೋ, ಬದನೇಕಾಯಿ, ಬಾಳೆ ಮತ್ತಿತರ ಬೆಳೆಗಳು ಮಳೆಗೆ ಆಹುತಿಯಾಗಿವೆ. ಕೂಡಲೇ ರಾಜ್ಯ ಸರ್ಕಾರ ರೈತರ ಪರವಾಗಿ ತುರ್ತು ಪರಿಹಾರ ಘೋಷಣೆ ಮಾಡಬೇಕು, ನಮ್ಮ ಭಾಗದ ಸಮಸ್ಯೆಗಳ ಕುರಿತಾಗಿ ರೈತ ಹೋರಾಟಗಾರರೊಂದಿಗೆ ಮುಖ್ಯಮಂತ್ರಿಗಳು ಸಭೆ ಕರೆಯಬೇಕು ಎಂದು ಆಗ್ರಹಿಸಿದರು.
ಗ್ರಾಮೀಣ ಭಾಗದಲ್ಲಿ ಹದಗೆಟ್ಟ ರಸ್ತೆ, ಟಿ.ಸಿ ಅಳವಡಿಕೆಯಲ್ಲಿ ವ್ಯತ್ಯಯ ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೆ.15 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ರಾಜ್ಯ ಕಾರ್ಯಾಧ್ಯಕ್ಷ ಮೌಲಾಮುಲ್ಲಾ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಮುಹಮ್ಮದ್ ಚೌಧರಿ, ಮಲ್ಲಿಕಾರ್ಜುನ್ ಕೆಲ್ಲೂರು, ಸಾಜಿದ್ ಅಹ್ಮದ್ ಸೇರಿದಂತೆ ಮತ್ತಿತರರು ಇದ್ದರು.





