ಕಲಬುರಗಿ| ಕಾಂಗ್ರೆಸ್ ಎಂಎಲ್ಎ ಒಡೆತನದ ಶಾಲೆಯಲ್ಲಿ ಆರೆಸ್ಸೆಸ್ ಬೈಠಕ್, ಪಥಸಂಚಲನ : ಶಾಸಕ ಎಂ.ವೈ ಪಾಟೀಲ್ ಸ್ಪಷ್ಟನೆ

ಕಲಬುರಗಿ: ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜ್ಯದಲ್ಲಿನ ಸರ್ಕಾರಿ ಹಾಗೂ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಆರೆಸ್ಸೆಸ್ ಚಟುವಟಿಕೆಯನ್ನು ನಿಷೇಧಿಸಬೇಕೆಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಬೆನ್ನಲ್ಲೇ ಅಫಜಲಪುರ ಶಾಸಕ ಎಂ.ವೈ ಪಾಟೀಲ್ ಒಡೆತನದ ಮಹಾಂತೇಶ್ವರ ಶಾಲೆಯಲ್ಲಿ ರವಿವಾರ ಸಂಜೆ ಆರೆಸ್ಸೆಸ್ ಬೈಠಕ್, ಪಥಸಂಚಲನ ಆಗಿರುವ ಬಗ್ಗೆ ಸುದ್ದಿ ಹರಿದಾಡಿದ ಬಳಿಕ ಸ್ಪಷ್ಟನೆ ಕೊಟ್ಟಿದ್ದಾರೆ.
ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಶಾಸಕ ಎಂ.ವೈ ಪಾಟೀಲ್, ನಮ್ಮ ಶಾಲೆ ಸಾರ್ವಜನಿಕರ ಸ್ವತ್ತು. ಈ ಹಿಂದೆ ಯಾರೆಲ್ಲ ಜಾಗ ಕೇಳಿದ್ದಾರೆ, ಅಂತಹ ಸಂಘಟನೆಯವರಿಗೆ ಕಾರ್ಯಕ್ರಮ ಮಾಡಿಕೊಡಲು ಜಾಗ ಕೊಟ್ಟಿದ್ದೇವೆ. ನಮ್ಮ ಶಾಲೆಯ ಕಾರ್ಯಚಟುವಟಿಕೆ ಇಲ್ಲದಿರುವ ಸಂದರ್ಭದಲ್ಲಿ ಸ್ಥಳಾವಕಾಶಕ್ಕೆ ಕೇಳಿದ್ದರಿಂದ ಜಾಗ ಕೊಟ್ಟಿದ್ದೇವೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಆರೆಸ್ಸೆಸ್ ನವರು ದೇಶವನ್ನು ಒಡೆಯುವ ಕೆಲಸ ಮಾಡುತ್ತಾರೆ, ಅವರ ಮೂಲ ಉದ್ದೇಶವೇ ಬೇರೆ. ಅವರು ನಡೆದುಕೊಳ್ಳುತ್ತಿರುವ ರೀತಿಯೇ ಬೇರೆಯಾಗಿದೆ. ದೇಶಭಕ್ತಿ ಅಂತ ಅವರು ಹೇಳ್ತಾರೆ. ಆದರೆ ನಮ್ಮ ದೇಶಕ್ಕೆ ಒಂದು ಸಂವಿಧಾನ, ರಾಷ್ಟ್ರಧ್ವಜ ಇದೆ, ಇದೇ ರಾಷ್ಟ್ರಧ್ವಜವನ್ನು ಅವರು ತಮ್ಮ ಕಚೇರಿಯಲ್ಲಿ ಒಂದಿನ ಕೂಡ ಹಾರಿಸಿಲ್ಲ, ಆರೆಸ್ಸೆಸ್ ನವರು ತಿರಂಗಾ ಧ್ವಜವನ್ನು ಇಟ್ಟುಕೊಂಡು ಹೋದರೆ ಸ್ವಾಗತಿಸುತ್ತೇವೆ. ಅದನ್ನು ಬಿಟ್ಟು ಲಾಠಿ ಸಂಸ್ಕೃತಿ ಪ್ರತಿಬಿಂಬಿಸುವುದು ತಪ್ಪಾಗುತ್ತದೆ ಎಂದು ಹೇಳಿದ್ದಾರೆ.







