ಕಲಬುರಗಿ | ಜಂಗಮಶೆಟ್ಟಿ ರಂಗಪ್ರಶಸ್ತಿಗೆ ಹಿರಿಯ ಕಲಾವಿದೆ ಗೀತಾ ಮೋಂಟಡ್ಕ, ದಯಾನಂದ ಬೀಳಗಿ ಆಯ್ಕೆ

ಕಲಬುರಗಿ: ಕಳೆದ 12 ವರ್ಷಗಳಿಂದ ಇಲ್ಲಿನ ರಂಗ ಸಂಗಮ ಕಲಾವೇದಿಕೆಯು ಕೊಡಮಾಡುತ್ತಾ ಬಂದಿರುವ ಎಸ್.ಬಿ.ಜಂಗಮಶೆಟ್ಟಿ ರಂಗ ಪ್ರಶಸ್ತಿಗೆ ವೃತ್ತಿ ರಂಗಭೂಮಿಯ ದಯಾನಂದ ಬೀಳಗಿ ಮತ್ತು ಸುಭದ್ರಾದೇವಿ ಜಂಗಮಶೆಟ್ಟಿ ರಂಗಪ್ರಶಸ್ತಿಗೆ ಹವ್ಯಾಸಿ ರಂಗಭೂಮಿಯ ನಟಿ ಗೀತಾ ಮೋಂಟಡ್ಕ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಎಲ್.ಬಿ.ಶೇಖ್ ಮಾಸ್ತರ್ ಹಾಗೂ ರಂಗಾಯಣ ನಿರ್ದೇಶಕಿ ಡಾ.ಸುಜಾತ ಜಂಗಮಶೆಟ್ಟಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಇಬ್ಬರಿಗೆ ಜು.20 ರಂದು ಕಲಬುರಗಿ ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಆಯೋಜಿಸಲಾಗುವ ಸಮಾರಂಭದಲ್ಲಿ ತಲಾ 10 ಸಾವಿರ ರೂ. ಪ್ರಶಸ್ತಿ ಪತ್ರ ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.
ಇವೆರಡೂ ಪ್ರಶಸ್ತಿಗಳ ಆಯ್ಕೆಗಾಗಿ ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಎಲ್.ಬಿ.ಶೇಖ್ ಮಾಸ್ತರ್ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಸದಸ್ಯರಾದ ಹಿರಿಯ ರಂಗಕರ್ಮಿ ಎಚ್.ಎಸ್.ಬಸವಪ್ರಭು, ರಂಗಕರ್ಮಿ ಶಾಂತಾಕುಲಕರ್ಣಿ, ಸಾಹಿತಿ ಬಿ.ಎಚ್.ನಿರಗುಡಿ ರಂಗಕರ್ಮಿ ನಾರಾಯಣ ಕುಲಕರ್ಣಿ, ರಂಗ ನಿರ್ದೇಶಕ ವಿಶ್ವರಾಜ ಪಾಟೀಲ್ ರಂಗಾಯಣ ನಿರ್ದೇಶಕಿ ಡಾ.ಸುಜಾತ ಜಂಗಮಶೆಟ್ಟಿ ಹಾಗೂ ರಂಗ ಸಂಗಮ ಕಲಾವೇದಿಕೆಯ ಅಧ್ಯಕ್ಷೆ ಶಿವಗೀತಾ ಬಸವಪ್ರಭು ಇದ್ದರು.





