ಕಲಬುರಗಿ | ಲೈಂಗಿಕ ಕಿರುಕುಳ ಕಾಯ್ದೆ-2013 ರ ಕುರಿತು ಜಾಗೃತಿ ಮೂಡಿಸಲು ತರಬೇತಿ ಕಾರ್ಯಾಗಾರ

ಕಲಬುರಗಿ : ಕರ್ತವ್ಯದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ-2013 ರ ಕುರಿತು ಜಾಗೃತಿ ಮೂಡಿಸಲು ಕಾರಾಗೃಹದ ಅಧಿಕಾರಿ/ ಸಿಬ್ಬಂದಿ ವರ್ಗಗಳಿಗೆ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಾಗಾರವನ್ನು ಉದ್ಘಾಟಿಸಿ ಕಡಗಂಚಿ ಕಾರ್ಮಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರೆಸ್ಟ್(ರಿ) ಶಾಖೆಯ ಕಾರ್ಯದರ್ಶಿಗಳಾದ ಡಾ.ಫಾಧರ್ ವಿಲಿಯಮ್ ಮಿರಿಂಡಾ ಅವರು ಮಾತನಾಡಿ, ಕರ್ತವ್ಯದ ಸ್ಥಳದಲ್ಲಿ ಮಹಿಳೆಯರಿಗಾಗಿ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ-2013ರ ಡಿ.9 ರಂದು ಜಾರಿಗೆ ಬಂದಿದ್ದು, ಕಾರ್ಯಕ್ಷೇತ್ರದಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವುದು ಹಾಗೂ ದೂರುಗಳನ್ನು ಪರಿಹರಿಸುವುದು ಮತ್ತು ತಡೆಯುವುದು ಈ ಕಾಯ್ದೆಯ ಮುಖ್ಯ ಉದ್ದೇಶವಾಗಿದೆ. ಕರ್ತವ್ಯದ ಸ್ಥಳದಲ್ಲಿ ಮಹಿಳೆಯರು ತಮ್ಮ ಮೇಲೆ ಲೈಂಗಿಕ ಕಿರುಕುಳದ ಸನ್ನಿವೇಶ ಕಂಡು ಬಂದಲ್ಲಿ ಯಾವುದೇ ಭಯ ಇಲ್ಲದೇ ಧೈರ್ಯವಾಗಿ ಅವರ ವಿರುದ್ಧ ದೂರನ್ನು ದಾಖಲಿಸಬೇಕು ಎಂದರು.
ಅಡ್ವಕೇಟ್ ಸಿಸ್ಟರ್ ಜಯಶ್ರೀ ಅವರು ಪ್ರೋಜಕ್ಟರ್ ಮೂಲಕ ಮಾಹಿತಿ ನೀಡುತ್ತಾ ಮಾತನಾಡಿ, ಕಾರ್ಯ ಕ್ಷೇತ್ರದಲ್ಲಿ ಮಹಿಳೆ ಮೇಲೆ ನಡೆಯುವ ದೌರ್ಜನ್ಯದ ಕುರಿತು ಲೈಂಗಿಕ ಕಿರುಕುಳದ ವ್ಯಾಪ್ತಿಯು ಸಾರ್ವಜನಿಕ, ಖಾಸಗಿ ಮತ್ತು ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುವ ಮಹಿಳೆಯವರ ಮೇಲೆ ನಡೆಯುವ ಲೈಂಗಿಕ ಕಿರುಕುಳದ ಬಗ್ಗೆ 2013 ರ ಕಾಯ್ದೆ ಅಡಿಯಲ್ಲಿ ವಿವಿಧ ಸೆಕ್ಷನ್‍ಗಳ ಮುಖಾಂತರ ವಿವರವಾಗಿ ತಿಳಿಸಿದರು. ಕಾರ್ಯ ಕ್ಷೇತ್ರದಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ದೂರನ್ನು ಪಡೆಯಲು ಮತ್ತು ಪರಿಹಾರವನ್ನು ಕಂಡುಕೊಳ್ಳಲು ಸಮಿತಿಯನ್ನು ರಚಿಸಬೇಕು. ಈ ಸಮಿತಿಯು ಕೂಲಂಕುಷವಾಗಿ ಪರಿಶೀಲಿಸಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಡಾ.ಅನಿತಾ ಆರ್. ಮಾತನಾಡಿ, ಕಾರಾಗೃಹದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿ/ಸಿಬ್ಬಂದಿಗಳ ಸುರಕ್ಷತೆಗಾಗಿ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಇಲಾಖೆಯ ಅಧಿಕಾರಿಗಳ ಜೊತೆಗೆ ಸ್ಥಳೀಯ ಎನ್.ಜಿ.ಓ. ಸದಸ್ಯರನ್ನು ಕೂಡ ಈ ಸಮಿತಿಯ ಸದಸ್ಯರನ್ನಾಗಿ ಮಾಡಿಕೊಳ್ಳಲಾಗಿದೆ. ಮಹಿಳಾ ಅಧಿಕಾರಿ/ಸಿಬ್ಬಂದಿಗಳಿಗೆ ತಮ್ಮ ಮೇಲೆ ಏನಾದರೂ ಲೈಂಗಿಕ ದೌರ್ಜನ್ಯದ ಸನ್ನಿವೇಶಗಳು ಕಂಡು ಬಂದಲ್ಲಿ ಸಮಿತಿಯ ಮುಂದೆ ಲಿಖಿತವಾಗಿ ದೂರನ್ನು ನೀಡುವುದು. ತಮ್ಮ ದೂರನ್ನು ಸಮಿತಿಯು ಪರಿಶೀಲಿಸಿ ವರದಿಯನ್ನು ನೀಡಿದ್ದಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದೆಂದು ಹೇಳಿದರು.
ಕಾರಾಗೃಹದಲ್ಲಿ ದಾಖಲಾಗಿರುವ ಮಹಿಳಾ ಬಂದಿಗಳಿಗೆ ಕಡಗಂಚಿ ಕಾರ್ಮಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರೆಸ್ಟ್(ರಿ) ಶಾಖೆಯ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಾದವರಿಗೆ ಬಹುಮಾನವನ್ನು ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಫಾದರ್ ದೀಪಕ್ ತಮಾಸ್, ಫಾದರ್ ಮಾಝಿನ್ ಎಸ್. ವಿರೋನಿಕಾ, ಸಹಾಯಕ ಅಧೀಕ್ಷಕ ಚನ್ನಪ್ಪ, ಕಾರಾಗೃಹದ ಲಿಪಿಕ/ಕಾರ್ಯನಿರ್ವಾಹಕ ಅಧಿಕಾರಿ/ಸಿಬ್ಬಂದಿಗಳು ಭಾಗವಹಿಸಿದ್ದರು.
ಪ್ರಾರಂಭದಲ್ಲಿ ಅಶ್ವಿನಿ ಹಿರೇಮಠ ಅವರು ಸ್ವಾಗತಿಸಿದರು. ಸಂಸ್ಥೆಯ ಶಿಕ್ಷಕರಾದ ನಾಗರಾಜ ಮುಲಗೆ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಈ ಸಂಸ್ಥೆಯ ಸಹಾಯಕ ಅಧೀಕ್ಷಕ ಬಿ. ಸುರೇಶ್ ವಂದಿಸಿದರು. ಸಂಸ್ಥೆಯ ಸಹಾಯಕ ಅಡಳಿತಾಧಿಕಾರಿಗಳಾದ ಭೀಮಾಶಂಕರ ಡಾಂಗೆ ಪ್ರಾರ್ಥನಾ ಗೀತೆ ಹಾಡಿದರು.







