ಕಲಬುರಗಿ | ಸರಸ್ ಮೇಳಕ್ಕೆ ಎರಡು ದಿನ ಬಾಕಿ : ಹೆಚ್ಚಿನ ಸಂಖ್ಯೆಯಲ್ಲಿ ಮೇಳದಲ್ಲಿ ಭಾಗವಹಿಸುವಂತೆ ಡಿ.ಸಿ. ಮನವಿ

ಬಿ.ಫೌಝಿಯಾ ತರನ್ನುಮ್
ಕಲಬುರಗಿ : ನಗರದ ಶ್ರೀ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಫೆ.24 ರಿಂದ ಆರಂಭಗೊಂಡಿರುವ ರಾಷ್ಟ್ರಮಟ್ಟದ ಬೃಹತ್ ನಮ್ಮ ಸರಸ್ ಮೇಳ-2025 ಸಮಾರೋಪಕ್ಕೆ ಇನ್ನೆರಡು ದಿನ ಬಾಕಿ ಉಳಿದಿದ್ದು, ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮೇಳಕ್ಕೆ ಭೇಟಿ ನೀಡುವಂತೆ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಮನವಿ ಮಾಡಿದ್ದಾರೆ.
ಸರಸ್ ಮೇಳಕ್ಕೆ ಜಿಲ್ಲೆಯ ಜನತೆಯಿಂದ ಉತ್ತಮ ಪ್ರತಿಕ್ರೆಯೆ ವ್ಯಕ್ತವಾಗಿದ್ದು, ಇದೂವರೆಗೆ ಒಂದೂವರೆ ಲಕ್ಷಕ್ಕಿಂತ ಹೆಚ್ಚಿನ ಜನ ಭೇಟಿ ನೀಡಿದ್ದಾರೆ. ಇದೂವರೆಗೆ ಮೇಳಕ್ಕೆ ಭೇಟಿ ನೀಡಿದವರು ಮತ್ತೊಮ್ಮೆ ಮೇಳಕ್ಕೆ ಭೇಟಿ ನೀಡುವಂತೆ ಕೋರಿದ್ದಾರೆ.
ಗ್ರಾಮೀಣ ಮತ್ತು ನಗರ ಪ್ರದೇಶಗಳ ಮಹಿಳಾ ಸ್ವ-ಸಹಾಯ ಗುಂಪುಗಳು ತಯಾರಿಸುವ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಒಂದು ಬೃಹತ್ ವೇದಿಕೆಯನ್ನು ಕಲಬುರಗಿಯಲ್ಲಿ ಕಲ್ಪಿಸಿದ್ದು, ಪ್ರತಿದಿನ ಬೆಳಗ್ಗೆ 10.30 ರಿಂದ ರಾತ್ರಿ 9.30 ಗಂಟೆ ವರೆಗೆ ಮಳಿಗೆಗಳು ತೆರೆಯಲಿವೆ.
ಕಲಬುರಗಿ ಜನತೆಗೆ ವಿವಿಧ ರಾಜ್ಯಗಳ ವೈವಿದ್ಯಮಯ ವಸ್ತುಗಳ ಖರೀದಿಗೆ ಅಪೂರ್ವ ಅವಕಾಶ ಇದಾಗಿದ್ದು, ಫೆ.5ರ ವರೆಗೆ ಮೇಳ ನಡೆಯಲಿದೆ. ಜಿಲ್ಲೆಯ ಜನ ಇದರ ಲಾಭ ಪಡೆಯಬೇಕು. ಸ್ವ-ಸಹಾಯ ಗುಂಪುಗಳು ತಯಾರಿಸಿರುವ ವಿವಿಧ ವಸ್ತುಗಳ ಖರೀದಿಸುವ ಮೂಲಕ ಅವರ ಸ್ವಯಂ ಉದ್ಯೋಗ ಕಾರ್ಯಕ್ಕೆ ಬೆಂಬಲಿಸಬೇಕೆಂದು ಎಂದು ಅವರು ಮನವಿ ಮಾಡಿದ್ದಾರೆ.
20 ಲೈವ್ ಫುಡ್ ಸ್ಟಾಲ್ ಅಲ್ಲದೆ ನಮ್ಮ ಸರಸ್ ಮೇಳದಲ್ಲಿ ಒಂದೇ ಸೂರಿನಡಿ 230 ಮಳಿಗೆಗಳನ್ನು ಹಾಕಲಾಗಿದೆ. ಪ್ರಮುಖವಾಗಿ ಬಿದರಿ ಕಲೆ, ಚನ್ನಪಟ್ಟಣ ಗೊಂಬೆ, ಕಿನ್ನಾಳ ಆಟಿಕೆ, ಇಳಕಲ್ ಸೀರೆ, ಮೈಸೂರು ಇನ್ಲೇ, ಚಿಕ್ಕಬಳ್ಳಾಪುರ ಲೆದರ್ ಪಪ್ಪೆಟ್, ಲಂಬಾಣಿ ಕುಸುರಿ ಕಲೆ, ಖಾದಿ ಬಟ್ಟೆಗಳು, ಮಲೆನಾಡಿನ ಉಪ್ಪಿನಕಾಯಿ, ಹ್ಯಾಂಡ್ ಲೂಮ್ ಸೀರೆಗಳು, ಟೆರಿಕೋಟ್ ಆಭರಣಗಳು, ಹೋಂ ಮೇಡ್ ಸೌಂದರ್ಯ ವರ್ಧಕಗಳು, ಹರ್ಬಲ್ ಸೋಪ್ ಗಳು, ಸ್ಯಾನಿಟರಿ ನ್ಯಾಪ್ಕಿನ್ಸ್, ಸೆಣಬಿನ ಬ್ಯಾಗ್ ಗಳು ಹೀಗೆ ರಾಜ್ಯದ 30 ಜಿಲ್ಲೆಯ 200ಕ್ಕೂ ಹೆಚ್ಚು ಮಳಿಗೆಗಳಿವೆ.
ಇನ್ನೂ 10 ಹೊರ ರಾಜ್ಯಗಳಿಂದ ಆಗಮಿಸಿರುವ ಮಹಿಳಾ ಸ್ವ-ಸಹಾಯ ಗುಂಪುಗಳು ಇಲ್ಲಿ ಮಳಿಗೆ ತೆರೆದಿದ್ದು, ಪಂಜಾಬಿನ ಹ್ಯಾಂಡ್ ಮೇಡ್ ಬಳೆಗಳು, ಆಂಧ್ರಪ್ರದೇಶ ಲೆದರ್ ಪಪ್ಪೆಟ್ಸ್, ಮಣಿಪುರದ ಹ್ಯಾಂಡ್ ಲೂಮ್ ಸೀರೆಗಳು, ಕೇರಳದ ಹರ್ಬಲ್ ಸೋಪ್ ಗಳು, ಸಿರಿಧಾನ್ಯಗಳ ಉತ್ಪನ್ನಗಳು, ಕಾಫಿಪುಡಿ, ತಮಿಳುನಾಡಿನ ಬ್ಯಾಗ್ ಗಳು, ಬಿಹಾರಿ ಹ್ಯಾಂಡ್ ಲೂಮ್ಸ್, ರಾಜಸ್ಥಾನಿ ಉಡುಪುಗಳು, ಮಧ್ಯಪ್ರದೇಶದ ಕುರ್ತೀಸ್ ಮುಂತಾದವುಗಳು ಮಾರಟಕ್ಕಿವೆ.
ಪ್ರತಿ ದಿನ ಸಂಜೆ ರಸಮಂಜರಿ :
ವಸ್ತುಗಳ ಖರೀದಿಗೆ ಬರುವ ಸಾರ್ವಜನಿಕರ ಮನ ತಣಿಸಲೆಂದೆ ಪ್ರತೀ ದಿನ ಮುಸ್ಸಂಜೆ ವೇಳೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಖ್ಯಾತ ಕಲಾವಿದರಿಂದ ಮತ್ತು ಸ್ಥಳೀಯ ಕಲಾವಿದರಿಂದ ಸಾಂಸ್ಕತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ. ಕಲಾ ರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಡಿಸಿ ಬಿ.ಫೌಝಿಯಾ ತರನ್ನುಮ್ ಅವರು ಕೋರಿದ್ದಾರೆ.







