ಕಲಬುರಗಿ | ಸಿಯುಕೆಯಲ್ಲಿ ಎರಡು ವಾರಗಳ ʼನಶಾ ಮುಕ್ತ ಭಾರತʼ ಕಾರ್ಯಕ್ರಮದ ಉದ್ಘಾಟನೆ

ಕಲಬುರಗಿ: ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ವ್ಯಸನ ವಶವಾಗದೇ ಆರೋಗ್ಯವನ್ನೇ ಆಶ್ರಯಿಸಿಕೊಳ್ಳುವಂತಾಗಲು ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳು ಮುನ್ನೆಚ್ಚರಿಕೆ ಜವಾಬ್ದಾರಿ ವಹಿಸಬೇಕು ಎಂದು ಕಲಬುರಗಿಯ ಮನೋವೈದ್ಯ ಡಾ.ರಾಹುಲ್ ಮಂದಕನಳ್ಳಿ ಸಲಹೆ ನೀಡಿದರು.
ಆಳಂದ ತಾಲೂಕಿನ ಕಡಗಂಚಿ ಬಳಿಯ ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ (ಸಿಯುಕೆ), ಸಮಾನ ಅವಕಾಶಗಳ ಕೋಶ, ಸಮಾಜ ಕಾರ್ಯ ವಿಭಾಗ ಮತ್ತು ಮನೋವಿಜ್ಞಾನ ವಿಭಾಗ ಜಂಟಿಯಾಗಿ ಆಯೋಜಿಸಿದ್ದ“ಎರಡು ವಾರಗಳ ʼನಶಾ ಮುಕ್ತ ಭಾರತʼ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಮಾತನಾಡಿದರು.
“ಕಳೆದ ಮೂರು ನಾಲ್ಕು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಮಾದಕ ವ್ಯಸನದ ಸಂಖ್ಯೆೆ ಬಹಳ ಹೆಚ್ಚಾಗಿದ್ದು, ಸಾಮಾಜಿಕ ಮಾಧ್ಯಮ ಮತ್ತು ಸಮೂಹ ಮಾಧ್ಯಮದ ಕಾರ್ಯಕ್ರಮಗಳು ಯುವಜನರಲ್ಲಿ ಮಾದಕ ವ್ಯಸನ ಹೆಚ್ಚಾಗಲು ಪ್ರಭಾವ ಬೀರುತ್ತಿವೆ. ಮಾದಕ ವ್ಯಸನವು ಯುವಕರ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ಆದ್ದರಿಂದ ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳು ಮುನ್ನೆಚ್ಚರಿಕೆ ವಹಿಸಬೇಕು ಮತ್ತು ಮಾದಕ ವ್ಯಸನವನ್ನು ತಡೆಗಟ್ಟುವಲ್ಲಿ ಅವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಈ ರೀತಿಯ ಜಾಗೃತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ಆಕರ್ಷಿತರಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ” ಎಂದು ಹೇಳಿದರು.
ಸಿಯುಕೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ಸಮಾಜ ವಿಜ್ಞಾನ ನಿಕಾಯದ ಡೀನ್ ಪ್ರೊ.ಪವಿತ್ರಾ ಆಲೂರ್ ಮಾತನಾಡಿದರು.
ಇದಕ್ಕೂ ಮುನ್ನ ಮನೋವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಕಿರುನಾಟಕ ಪ್ರದರ್ಶಿಸಿ ಜಾಗೃತಿ ರ್ಯಾಲಿ ನಡೆಸಿದರು. ಡಾ.ಆಸ್ತಾ ನಿರೂಪಿಸಿದರು, ಪ್ರೊ.ದೇವರಾಜಪ್ಪ ಸ್ವಾಗತಿಸಿದರು, ಪ್ರೊ.ವಿಜಯೇಂದ್ರ ಪಾಂಡೆ, ಪ್ರೊ.ರೋಮಟೆ ಜಾನ್, ಡಾ.ಎಸ್. ಜಯವೇಲು, ಡಾ.ಲಕ್ಷ್ಮಣ, ಡಾ.ರವೀಂದ್ರ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







