ಅಟ್ರಾಸಿಟಿ ಆರೋಪಿತ ಕುಲಪತಿ, ಕುಲಸಚಿವ, ಭದ್ರತಾ ಅಧಿಕಾರಿ ಘಟಿಕೋತ್ಸವದಲ್ಲಿ ಭಾಗಿ
ಸಂಶೋಧನಾ ವಿದ್ಯಾರ್ಥಿಯಿಂದ ರಾಷ್ಟ್ರಪತಿಗೆ ಪತ್ರ

ಘಟಿಕೋತ್ಸವ, ಡಾ.ನಂದಪ್ಪ ಪಿ.
ಕಲಬುರಗಿ : ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ ಹಾಗೂ ಭದ್ರತಾ ಅಧಿಕಾರಿ ಮಿಥಿಲೇಶ ವಿರುದ್ಧ ಅಟ್ರಾಸಿಟಿ ದೂರು ದಾಖಲಾಗಿದ್ದು, ಇವರು ಘಟಿಕೋತ್ಸವದಲ್ಲಿ ಭಾಗವಹಿಸಬಾರದು ಎಂದು ಹಲವರು ವಿರೋಧ ವ್ಯಕ್ತಪಡಿಸಿದರೂ ಮಂಗಳವಾರ ನಡೆದ ವಿವಿಯ ಘಟಿಕೋತ್ಸವದಲ್ಲಿ ಅವರು ಭಾಗಿಯಾಗಿದ್ದಾರೆ.
ವಿ.ಸಿ.ಪ್ರೊ.ಬಟ್ಟು ಸತ್ಯನಾರಾಯಣ, ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ ಹಾಗೂ ಭದ್ರತಾ ಅಧಿಕಾರಿ ಮಿಥಿಲೇಶ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ. ಈ ಪ್ರಕರಣ ಈಗ ಕಲಬುರಗಿಯ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಇವರ ವಿರುದ್ಧ ಆರೋಪ ಪಟ್ಟಿಯೂ ಸಲ್ಲಿಕೆಯಾಗಿದೆ.
ಮೂವರೂ ಆರೋಪಿಗಳು ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ. ಆದ್ದರಿಂದ ಮಾ.11ರಂದು ನಡೆಯುವ ಕೇಂದ್ರೀಯ ವಿವಿ 8ನೇ ಘಟಿಕೋತ್ಸವದಲ್ಲಿ ಭಾಗವಹಿಸುತ್ತಿರುವುದು ಸಂವಿಧಾನಾತ್ಮಕ ಹುದ್ದೆಗೆ ಚ್ಯುತಿ ಬಗೆದಂತೆ ಆಗುತ್ತದೆ ಎಂದು ಕನ್ನಡ ವಿಭಾಗದ ಸಂಶೋಧನಾರ್ಥಿ ಡಾ.ನಂದಪ್ಪ ಪಿ. ಅವರು ರಾಷ್ಟ್ರಪತಿಗೆ ಪತ್ರ ಬರೆದಿದ್ದರು.
ಪತ್ರದಲ್ಲಿ ‘ಘಟಿಕೋತ್ಸವದಲ್ಲಿ ಭಾಗವಹಿಸುವುದು ಶೈಕ್ಷಣಿಕ ವಿಶ್ವಾಸಾರ್ಹತೆ ಮತ್ತು ಸಾಂವಿಧಾನಿಕ ನೀತಿಗೆ ಧಕ್ಕೆ ತಂದಂತಲ್ಲವೇ?. ಅಪರಾಧಿ ಸ್ಥಾನದಲ್ಲಿರುವ ಕುಲಪತಿ, ಕುಲಸಚಿವರು ವಿಶ್ವವಿದ್ಯಾನಿಲಯದ ಘಟಿಕೋತ್ಸವವನ್ನು ನಡೆಸಿದರೆ ಭಾರತ ಸಂವಿಧಾನಕ್ಕೆ ಹಾಗೂ ವಿಶ್ವವಿದ್ಯಾನಿಲಯದ ಘನತೆಗೆ ಕುಂದುಂಟು ಮಾಡಿದಂತೆ. ಇವರ ಈ ನಡೆಯನ್ನು ನಾನು ಅವಮಾನಕರ ಎಂದು ಭಾವಿಸುತ್ತೇನೆ, ಶೈಕ್ಷಣಿಕವಾಗಿ ಸಾಧನೆ ಮಾಡಿದ ಸ್ಫೂರ್ತಿದಾಯಕ ವ್ಯಕ್ತಿಗಳಿಂದ ಪದವಿ ಸ್ವೀಕರಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಮೂಲಭೂತ ಹಕ್ಕು ಹಾಗೂ ಹೆಮ್ಮೆಯ ಸಂಗತಿ. ಕ್ರಿಮಿನಲ್ ಆರೋಪ ಹೊತ್ತಿರುವ ಕುಲಪತಿಗಳು ಹಾಗೂ ಕುಲಸಚಿವರಿಂದ ಅವರ ಸಮ್ಮುಖದಲ್ಲಿ ವಿದ್ಯಾರ್ಥಿಗಳು ತಮ್ಮ ಪದವಿಗಳನ್ನು ಪಡೆಯುವುದು ನ್ಯಾಯ ಸಮ್ಮತವಲ್ಲ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವಿವಿಯ ಕುಲಪತಿಗಳ ವಿರುದ್ಧ ರಾಷ್ಟ್ರಪತಿಗಳಿಗೆ ಪತ್ರ ಬರೆದು ಸಂಚಲನ ಮೂಡಿಸಿದ ಸಂಶೋಧನಾರ್ಥಿ ಕೂಡ ಅದೇ ಆರೋಪಿಗಳ ಪಕ್ಕದಲ್ಲಿ ನಿಂತುಕೊಂಡು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಇಸ್ರೋ ಅಧ್ಯಕ್ಷ ಡಾ.ವಿ.ನಾರಾಯಣನ್ ಅವರ ಕೈಯಿಂದ ಡಾಕ್ಟರೇಟ್ ಪದವಿ ಸ್ವೀಕರಿಸಿದ್ದಾರೆ. ಆರೋಪಿಗಳ ಪಕ್ಕದಲ್ಲಿ ನಿಂತುಕೊಂಡು ಪದವಿ ಸ್ವೀಕರಿಸಿದ ಬಳಿಕ ಡಾ.ನಂದಪ್ಪ ಪಿ.ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿರೋಧದ ನಡುವೆಯೂ ಘಟಿಕೋತ್ಸವದಲ್ಲಿ ಆರೋಪಿತ ಕುಲಪತಿ, ಕುಲಸಚಿವ ಮತ್ತು ಭದ್ರತಾ ಅಧಿಕಾರಿ ಮಿಥಿಲೇಶ ಭಾಗಿಯಾಗಿರುವುದು ದೊಡ್ಡ ದುರಂತ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.







