ಕಲಬುರಗಿ | ವಾಡಿ ಪುರಸಭೆ ಚುನಾವಣೆ ಮೀಸಲಾತಿ ಸರಿಪಡಿಸಲು ವೀರಣ್ಣ ಯಾರಿ ಆಗ್ರಹ

ಕಲಬುರಗಿ : ವಾಡಿ ಪಟ್ಟಣದ ಪುರಸಭೆ ಚುನಾವಣೆಗಾಗಿ ಫೆ.17ರಂದು ವಾರ್ಡ್ ವಾರು ಮೀಸಲಾತಿಯ ಪಟ್ಟಿ ಪ್ರಕಟಿಸಿರುವುದರಲ್ಲಿ ತಾರತಮ್ಯದಿಂದ ಹಿಂದುಳಿದ ವರ್ಗಕ್ಕೆ ಅಧಿಕಾರದಿಂದ ವಂಚಿಸುವ ಮೀಸಲಾತಿ ಇದಾಗಿದ್ದು, ಪುನರ್ ಪರಿಶೀಲಿಸಿ ಸರಿಪಡಿಸಬೇಕೆಂದು ವಾಡಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಪಟ್ಟಣದ ವಾರ್ಡ್ ಗಳ ಜಾತಿವಾರು ಅನುಗುಣವಾಗಿ ಮೀಸಲಾತಿ ನಿಗದಿ ಮಾಡಬೇಕು ಎನ್ನುವುದು ಸಂವಿಧಾನದ ನಿಯಮ. ಹಾಲಿ ಮೀಸಲಾತಿ ಪಟ್ಟಿಯನ್ನು ಸಮಗ್ರವಾಗಿ ಪರಿಶೀಲಿಸದೇ, 23 ವಾರ್ಡ್‌ಗಳಿಗೆ ನಿಗದಿ ಮಾಡಿದ ಮೀಸಲಾತಿ ಯಾವುದೇ ಜಾತಿವಾರು ನಿಯಮಗಳಿಗೆ ಅನುಗುಣವಾಗಿಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ಈ ರೀತಿ ಮೀಸಲಾತಿ ಪ್ರಕಟವಾಗಿದ್ದಕ್ಕೆ ಕೋರ್ಟ್ ಮೆಟ್ಟಿಲೇರಿದರಿಂದ ಒಂದು ವರ್ಷ ಚುನಾವಣೆ ಮುಂದೂಡಿಕೆಯಾಯಿತು. ಬಹುದಿನಗಳಿಂದ ಪುರಸಭೆ ಚುನಾವಣೆ ಇಲ್ಲದೆ ಪಟ್ಟಣದ ಅಭಿವೃದ್ಧಿ ಕುಂಠಿತವಾಗಿದೆ. ಮತ್ತೆ ಈ ರೀತಿ ಮೀಸಲಾತಿ ಪ್ರಕಟಿಸಿ ಮತ್ತೆ ಚುನಾವಣೆ ಮುಂದಾಕುವ ತಂತ್ರವಾಗಿದೆ ಎಂದು ಆರೋಪಿಸಿದ್ದ ಅವರು ಹೊರಡಿಸಿರುವ ಮೀಸಲಾತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಹಿಂದುಳಿದ ವರ್ಗಗಳಿಗೆ ನ್ಯಾಯ ಸಮ್ಮತ ಮೀಸಲಾತಿ ಒದಗಿಸಿ ಆದಷ್ಟು ಬೇಗ ಚುನಾವಣೆ ಘೋಷಣೆ ಮಾಡಬೇಕೆಂದು ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.







